Connect with us

    DAKSHINA KANNADA

    ಮುಕ್ಕೂರು-ಕುಂಡಡ್ಕ ಶ್ರೀ ಗಣೇಶೋತ್ಸವದ ‘ಹತ್ತರ ಹುತ್ತರಿ’ ಕಾರ್ಯಕ್ರಮ

    ಮುಕ್ಕೂರು-ಕುಂಡಡ್ಕ ಶ್ರೀ ಗಣೇಶೋತ್ಸವದ ‘ಹತ್ತರ ಹುತ್ತರಿ’ ಕಾರ್ಯಕ್ರಮ

    ಪುತ್ತೂರು ಸೆಪ್ಟೆಂಬರ್ 3: ತುಳುನಾಡಿನ ಸಂಪ್ರದಾಯ ಹಾಗೂ ಗಣಪತಿಗೆ ಹತ್ತಿರದ ಸಂಬಂಧವಿದೆ. ರೈತ ತನ್ನ ನೆಲದ ಹುಟ್ಟುವಳಿಯನ್ನು ಕಟ್ಟುವುದೇ ಗಣಪತಿ ಇಡುವುದರಿಂದ. ಗಣಪತಿಯ ಸೃಷ್ಠಿ ಬೆವರು ಮತ್ತು ಮಣ್ಣಿನಿಂದ ಇದು ಕೃಷಿಯ ಸಂಕೇತವೂ ಆಗಿದೆ. ಹಳ್ಳಿಯ ಸಮುದಾಯವೊಂದು ಒಟ್ಟಾಗಿ ಊರನ್ನು ಸಂಸ್ಕರಿಸಿದ ಶಾಲೆಯಲ್ಲಿ ಸಾಮರಸ್ಯದಿಂದ ನಡೆಸುವ ಹಬ್ಬವೇ ನಿಜವಾದ ಗಣೇಶೋತ್ಸವ ಎಂದು ಪುತ್ತೂರು ಸರಕಾರಿ ಮಹಿಳಾ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ನರೇಂದ್ರ ರೈ ದೇರ್ಲ ಹೇಳಿದರು.

    ಅವರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಕುಂಡಡ್ಕ-ಮುಕ್ಕೂರು ಇದರ ದಶಮಾನೋತ್ಸವದ ಪ್ರಯುಕ್ತ ನಡೆದ ‘ಹತ್ತರ ಹುತ್ತರಿ’ ಸಭಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಗೈದರು. ಸೃಜಶೀಲತೆಯ ನೇತಾರರಿಗೆ ಗಣಪತಿ ಆರಾಧ್ಯ ದೇವರು. ಸಾರ್ವಜನಿಕವಾಗಿ ಆಚರಿಸಲ್ಪಡುವ ಗಣಪತಿ ಜನಪ್ರಿಯತೆಯ ಶಕ್ತಿ. ಸಮಷ್ಠಿಯ ಬಹುತ್ವದ ರೂಪವೇ ಗಣಪತಿ. ಜನರ ನಡುವಿನ ಸಂಬಂಧದ ಕೊರತೆಯಿಂದ ಇತ್ತೀಚಿನ ದಿನಗಳಲ್ಲಿ ಬಹುತ್ವ ಮರೆಯಾಗುತ್ತಿದೆ ಎಂದು ಅವರು ಹೇಳಿದರು.

    ಹತ್ತರ ಹುತ್ತರಿ ಸಭಾ ಕಾರ್ಯಕ್ರಮವನ್ನು ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಉದ್ಘಾಟಿಸಿ , ಸ್ವಾತಂತ್ರ್ಯ ಹೊರಾಟಕ್ಕೆ ಯುವಕರನ್ನು ಒಗ್ಗೂಡಿಸಲು ತಿಲಕರು ಆರಂಭಿಸಿದ ಗಣೇಶೋತ್ಸವ ಸಾಮರಸ್ಯದ ಸಂಕೇತವಾಗಿದ್ದು, ಪ್ರಸ್ತುತ ದಿನಗಳಲ್ಲಿ ಸಾಮರಸ್ಯದ ಅಗತ್ಯತೆ ಇದ್ದು, ಸಾಮರಸ್ಯದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು.
    ಸುಳ್ಯ ತಹಶೀಲ್ದಾರ್ ಕುಂಞ ಅಹಮ್ಮದ್ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಭಾರತದ ಪವಿತ್ರವಾದ ಮಣ್ಣಿನಲ್ಲಿ ಆಚಾರ,ವಿಚಾರ, ಸಂಸ್ಕೃತಿ ಅಡಕವಾಗಿದೆ. ಇಂತಹ ಮಣ್ಣಿನಲ್ಲಿ ಜಾತಿ, ಮತ,ಧರ್ಮ ಮೀರಿ ಉತ್ಸವಗಳಾಗಬೇಕು. ಕೃಷಿಕನ ನೇಗಿಲ ಜೀವನವನ್ನು ನೆನಪಿಸುವ ಗಣೇಶನ ಹಬ್ಬ ವೈಶಿಷ್ಟ್ಯಪೂರ್ಣವಾಗಿದೆ ಎಂದರು.

    ಸಾಧಕರಿಗೆ ಸಮ್ಮಾನ

    ವೈದ್ಯ ಡಾ.ನರಸಿಂಹ ಶರ್ಮಾ ಕಾನಾವು, ಭೂ ವಿಜ್ಞಾನಿ ಸಂಧ್ಯಾ ಕುಮಾರಿ, ಹೈನುಗಾರಿಕಾ ಸಾಧಕ ಜಗನ್ನಾಥ ಪೂಜಾರಿ ಮುಕ್ಕೂರು, ಪ್ರಗತಿಪರ ಕೃಷಿಕ ಇಸ್ಮಾಯಿಲ್ ಕುಂಡಡ್ಕ, ಸಾಹಿತ್ಯ ಸಾಧಕಿ ಅಶ್ವಿನಿ ಕೋಡಿಬೈಲು, ನಾಟಿ ವೈದ್ಯೆ ಯಶೋಧಾ ಬೀರುಸಾಗು, ದೈವ ಪರಿಚಾರಕ ಕೊರಗ್ಗು ಅನೋವುಗುಂಡಿ, ಹಿರಿಯ ನಾಗರಿಕ ಕಂಜೋಲಿ ಇವರುಗಳನ್ನು ಸನ್ಮಾನಿಸಲಾಯಿತು. ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಸಾಧಕರ ಅಭಿನಂದನಾ ಮಾತುಗಳನ್ನಾಡಿದರು.

    ಪ್ರತಿಭಾ ಪುರಸ್ಕಾರ

    ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಾಧಕ 12 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
    ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯನ್ನು ಮನ್ನಡೆಸಿದ 10 ಮಂದಿ ಅಧ್ಯಕ್ಷರುಗಳನ್ನು ಗೌರವಿಸಲಾಯಿತು.

    ದಶಮಾನೋತ್ಸವ ಸಮಿತಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಾರೆ ಠಾಣಾ ಸಬ್ ಇನ್ಸ್ ಪೆಕ್ಟರ್ ಈರಯ್ಯ ಡಿ.ಎನ್, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ|ಪೊಡಿಯಾ, ಡಿಸಿಸಿ ಬ್ಯಾಂಕ್ ಮಾರಾಟಾಧಿಕಾರಿ ಸಂತೋಷ್ ಕುಮಾರ್ ಮರಕ್ಕಡ, ಪೆರುವಾಜೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಲಲಿತಾ, ಮುಕ್ಕೂರು ಶಾಲಾ ಮುಖ್ಯಗುರು ವಸಂತಿ, ದಶಮಾನೋತ್ಸವ ಸಮಿತಿ ಗೌರವಾಧ್ಯಕ್ಷ ತಿರುಮಲೇಶ್ವರ ಭಟ್ ಕಾನಾವು, ಕಾರ್ಯಾಧ್ಯಕ್ಷ ಉಮೇಶ್ ಕೆಎಂಬಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಸಾದ್ ಎನ್.ಕೆ, ಕೋಶಾದಿಕಾರಿ ರಮೇಶ್ ಕಾನಾವು ಉಪಸ್ಥಿತರಿದ್ದರು.

    ಸಾಂಸ್ಕೃತಿಕ ಕಾರ್ಯಕ್ರಮ ಮುಕ್ಕೂರು ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕು.ಅವನಿ ಕೋಡಿಬೈಲು ಅವರ ಶಿವನನ್ನು ಕುರಿತ ವರ್ಣ ಭರತನಾಟ್ಯ, ತ್ರಿನಯನ ನಾಟ್ಯಾಲಯದ ವಿದುಷಿ ಆರಾಧಿತಾ ಕಾಯರ್‍ಮಾರ್ ಅವರ ಭರತನಾಟ್ಯ, ಕನ್ನಡ ಕೋಗಿಲೆ ಪ್ರಥಮ ರನ್ನರ್‍ಅಪ್ ಅಖಿಲಾ ಪಜಿಮಣ್ಣು ತಂಡದ ಗಾನಯಾನ ಸಂಗೀತ ರಸಸಂಜೆ, ಸುಂದರ ರೈ ಮಂದಾರ ತಂಡದ ಬಲೆ ತೆಲಿಪಾಲೆ ಕಾರ್ಯಕ್ರಮ ನಡೆಯಿತು.

    Share Information
    Advertisement
    Click to comment

    Leave a Reply

    Your email address will not be published. Required fields are marked *