DAKSHINA KANNADA
ಮೂಡುಬಿದಿರೆ: ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಆರೋಪ
ಮೂಡುಬಿದಿರೆ, ಮಾರ್ಚ್ 02: ಸರ್ಕಾರದ ಯೋಜ ನೆಗಳ ಕಾಮಗಾರಿಗಳನ್ನು ಸಂಬಂಧಿಕ ಗುತ್ತಿಗೆದಾರರಿಗೆ ನೀಡಿ ಕಮಿಷನ್ ಪಡೆಯುತ್ತಿರುವ ಶಾಸಕರು ತಮ್ಮನ್ನು ತಾವು ಬಡವ ಎನ್ನುತ್ತಿದ್ದಾರೆ. ಅವರು ಎಷ್ಟು ಕೋಟಿಯ ಆಸ್ತಿ ಹೊಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸವಾಲು ಹಾಕಿದರು.
ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ತಾಲ್ಲೂಕು ಕಚೇರಿ ಎದುರು ಬ್ಲಾಕ್ ಕಾಂಗ್ರೆಸ್ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕೆಲವು ಕಾಮಗಾರಿಗಳನ್ನು ವೇಗದಲ್ಲಿ ಮಾಡಿಸಿಕೊಡುತ್ತಿರುವ ಶಾಸಕರು ಯುಜಿಡಿ ಮತ್ತು ಮಾರ್ಕೆಟ್ ಬಗ್ಗೆ ನಿರ್ಲಕ್ಚ್ಯ ಹೊಂದಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕುಮ್ಮಕ್ಕೂ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಪಿ.ಕೆ ಥಾಮಸ್, ವಾಸುದೇವ ನಾಯಕ್, ಸುರೇಶ್ ಪ್ರಭು, ಚಂದ್ರಹಾಸ ಸನಿಲ್, ಕೊರಗಪ್ಪ, ರಾಜೇಶ್ ಕಡಲಕೆರೆ, ಸುರೇಶ್ ಕೋಟ್ಯಾನ್, ಆಲ್ವಿನ್ ಮೆನೇಜಸ್ ಇದ್ದರು.