ಮಂಗಳೂರು, ಏಪ್ರಿಲ್20: ದೇಶದಲ್ಲಿ ಇಂದು ಸ್ಟಾರ್ಟ್ ಅಪ್ ಗಳಿಗೆ ಹೆಚ್ಚು ಉತ್ತೇಜನವನ್ನು ನೀಡಲಾಗುತ್ತಿದ್ದು, ಹೊಸ ಹೊಸ ಪ್ರಯೋಗಗಳಿಗೆ ಹೆಚ್ಚಿನ ಮನ್ನಣೆಯೂ ದೊರೆಯುತ್ತಿದೆ. ಹೊಸ ಆಲೋಚನೆಗಳನ್ನು ಉದ್ಯಮವಾಗಿ ಬದಲಾಯಿಸಿಕೊಂಡು ಯಶಸ್ವಿಯಾದವರ ಸಾಲಿಗೆ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಕುಳಾಯಿ ನಿವಾಸಿ ಭರತ್ ಕುಮಾರ್ ಕೂಡಾ ಸೇರುತ್ತಾರೆ. ಮಂಗಳೂರಿನ ಟ್ರಾಲ್ ಬೋಟ್ ಮಾಲಕರಾಗಿರುವ ಇವರು ರಿಸರ್ಕ್ಬುಲೇಟಿಂಗ್ ಅಕ್ವಾಕಲ್ಚರ್ ಸಿಸ್ಟಮ್ ( RAS ) ಬಳಸಿಕೊಂಡು ಮಡ್ ಏಡಿಗಳನ್ನು (ಕಲ್ಲು ಏಡಿ) ಸಾಕಾಣಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಮಂಗಳೂರು ಹೊರವಲಯದ ಕುಳಾಯಿಯ ತನ್ನ ಮನೆಯಲ್ಲೇ ಪ್ರಾಯೋಗಿಕವಾಗಿ ‘Crab Shack’ ಎಂಬ ಘಟಕವನ್ನು ಪ್ರಾರಂಭಿಸಿದ ಭರತ್ ಕುಮಾರ್ ಡಿ ಅವರು, ಸುಮಾರು 200 ಸ್ಟ್ಯಾಕಿಂಗ್ ಕ್ರೇಟ್ಗಳನ್ನು (ಮೀನುಗಳನ್ನು ಹಾಕಲು ಬಳಸುವ ಪ್ಲಾಸ್ಟಿಕ್ ಕ್ರೇಟ್) ಬಳಸಿಕೊಂಡು ಏಡಿಗಳನ್ನು ಸಾಕುವ ವ್ಯವಸ್ಥೆಯನ್ನು ನಿರ್ಮಿಸಿದ್ದಾರೆ. ಸ್ವಯಂಚಾಲಿತ ಫಿಲ್ಟ್ರೇಷನ್ ಹೊಂದಿರುವ RAS ವಿಧಾನವು ವರ್ಷಪೂರ್ತಿ ಉತ್ಪಾದನೆಯನ್ನು ಸಹಕಾರಿಯಾಗಿದ್ದು, ಏಡಿ ಉತ್ಪಾದನೆಯ ಸ್ಥಳವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತದೆ. ಈ ವ್ಯವಸ್ಥೆ ಋತುಮಾನಾಧಾರಿತ ಸಮುದ್ರ ಮೀನುಗಾರಿಕೆಗೆ ಅವಲಂಬನೆಯಿಂದ ದೊಡ್ಡ ಬದಲಾವಣೆಯಾಗಿದೆ ಎಂದು ಮ್ಯಾಂಗಲೋರ್ ಮಿರರ್ ಗೆ ತಿಳಿಸಿದ್ದಾರೆ.
ಹವ್ಯಾಸವಾಗಿ ಪ್ರಾರಂಭವಾದ ಭರತ್ ಅವರ ಈ ಉದ್ಯಮ ಇಂದು ವಿಸ್ತರಿಸಬಹುದಾದ ಉದ್ಯಮವಾಗಿ ರೂಪುಗೊಂಡಿದೆ. ಕುಳಾಯಿಯಲ್ಲಿ ಕಲ್ಲು ಏಡಿ ಸಾಕಾಣಿಕೆಯನ್ನು ಪ್ರಾರಂಭಿಸಿ ಸುಮಾರು ಒಂದು ವರ್ಷವಾಗಿದೆ, ಇದರಲ್ಲಿ ಬಹಳ ಪ್ರಯೋಗ ಮತ್ತು ತಪ್ಪುಗಳ ಮೂಲಕ ಸಾಕಷ್ಟು ವಿಚಾರಗಳನ್ನು ಕಲಿತುಕೊಂಡಿರುವ ಭರತ್ ಮೊದಲಿಗೆ ತನ್ನ ಬೋಟ್ ನಿಂದಲೇ ಪಡೆದುಕೊಳ್ಳುತ್ತಿದ್ದ ಭರತ್ ಇದೀಗ ಪೂರೈಕೆದಾರರಿಂದಲೂ ಕಲ್ಲು ಏಡಿಗಳನ್ನು ಪಡೆಯುತ್ತಿದ್ದಾರೆ. ಕಲ್ಲು ಏಡಿಗಳು ಹೆಚ್ಚಾಗಿ ಉಷ್ಣವಲಯದ ಮ್ಯಾಂಗ್ರೋವ್ ಪ್ರದೇಶಗಳು ಮತ್ತು ನದಿಯ ಹಿನ್ನೀರಿನ ಜಾಗದಲ್ಲಿ ಸಾಮಾನ್ಯವಾಗಿ ಕಂಡುಬರುವ ದೊಡ್ಡ ತಿನ್ನಬಹುದಾದ ಕ್ರಸ್ಟೇಶಿಯನ್ಗಳಾಗಿದ್ದು, ಸಿಹಿ ರುಚಿಯ ಮಾಂಸಕ್ಕಾಗಿ ಪ್ರಸಿದ್ಧವಾಗಿವೆ. ‘Scylla serrata’ ಎಂಬ ಪ್ರಜಾತಿಯು ಅತ್ಯಂತ ವ್ಯಾಪಕವಾಗಿ ಸಾಕಲ್ಪಡುತ್ತದೆ. ಈ ಕಲ್ಲು ಏಡಿಗಳು 2.5 ರಿಂದ 4 ಕೆ.ಜಿ ತೂಕದವರೆಗೆ ಬೆಳೆಯಬಲ್ಲವು ಮತ್ತು ಹೆಚ್ಚಿನವುಗಳು ಮಾರುಕಟ್ಟೆಗಳಲ್ಲಿ ಜೀವಂತವಾಗಿಯೇ ಮಾರಾಟವಾಗುತ್ತವೆ ಎಂದು ಮ್ಯಾಂಗಲೋರ್ ಮಿರರ್ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಭರತ್ ಅವರು ಈ ಕಲ್ಪನೆ ಕಳೆದ ಮಳೆಗಾಲದಲ್ಲಿ ಹುಟ್ಟಿಕೊಂಡಿತ್ತು. ಸೇಹಿತರ ಜೊತೆಗೆ ಕಲ್ಲು ಏಡಿಗಳನ್ನು ಹಿಡಿಯಲು ಹೋಗುತ್ತಿದ್ದರು. ನಂತರ ಕಲ್ಲು ಏಡಿಗಳನ್ನು ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಬೇಕೆಂಬ ಕುತೂಹಲ ಹುಟ್ಟಿಕೊಂಡಿತ್ತು. ಅಲ್ಲದೆ ಇವುಗಳ ಸಾಕಾಣಿಕೆ ಬಗ್ಗೆ ಅಧ್ಯಯನ ಮಾಡಲು ಸಿಂಗಾಪುರಕ್ಕೆ ಹೋಗಲೂ ಸಿದ್ದತೆ ನಡೆಸಿದ್ದರು. ಸೇಹಿತರಾದ ತೇಜಸ್ ಮತ್ತು ನಿಕ್ಷಿತ್ ಅವರೊಂದಿಗೆ ಹೋಟೆಲ್ ಮತ್ತು ಕಿರಾಣಿ ಅಂಗಡಿ ನಡೆಸುತ್ತಿರುವ ಭರತ್ ಅದರ ಜೊತೆಗೆ ಏಡಿಗಳ ಸಾಕಾಣಿಕೆಯ ವ್ಯವಸ್ಥೆಯಲ್ಲಿ ತೊಡಿಗಿಕೊಂಡಿದ್ದಾರೆ. ಏಡಿಗಳ ಸಾಕಾಣಿಕೆಗೆ ಬೇಕಾದ RAS ವ್ಯವಸ್ಥೆಯು ನೀರಿನ ಗುಣಮಟ್ಟವನ್ನು ಉತ್ತಮವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಏಡಿಗಳಿಗೆ ನೈಸರ್ಗಿಕವಾಗಿ ಸಿಗಬೇಕಾದ ಅಂಶಗಳನ್ನೂ ಈ ವ್ಯವಸ್ಥೆ ಪೂರೈಸುತ್ತದೆ.ಏಡಿಗಳ ಸಾಕಾಣಿಕೆಗೆ ಬೇಕಾದ ಸಮುದ್ರದ ನೀರನ್ನು ತಿಂಗಳಿಗೆ ಎರಡು ಬಾರಿ ಟ್ಯಾಂಕರ್ಗಳ ಮೂಲಕ ಘಟಕಕ್ಕೆ ತರಲಾಗುತ್ತದೆ, ಈ ಕಲ್ಲು ಏಡಿಗಳನ್ನು ಇಲ್ಲಿ 26-ಲೀಟರ್ ಬಾಕ್ಸ್ಗಳಲ್ಲಿ ಬೆಳೆಸಲಾಗುತ್ತಿದೆ.
ಆರಂಭದಲ್ಲಿ ಕೇವಲ 40 ಕ್ರೇಟ್ಗಳಿಂದ ಪ್ರಾರಂಭಿಸಿದ ಭರತ್, ಕ್ರಮೇಣ ಅದನ್ನು 200ಕ್ಕೆ ವಿಸ್ತರಿಸಿದರು, ಇದು ಕಲ್ಲು ಏಡಿಯ ಸಾಕಾಣಿಕೆಯ ಯಶಸ್ಸನ್ನು ತೋರಿಸುತ್ತಿದ್ದು, ಸಾಕಾಣಿಕೆ ಆರಂಭಿಸಿದ ಸುಮಾರು 25-60 ದಿನಗಳಲ್ಲಿ ಈ ಏಡಿಗಳು ಮಾರುಕಟ್ಟೆಗೆ ರವಾನಿಸುವುದಕ್ಕೆ ಸಿದ್ಧವಾಗುತ್ತದೆ. ಭರತ್ ಅವರ ಕುಳಾಯಿಯ ಘಟಕದಲ್ಲಿ, 2.2 ಕಿಲೋಗ್ರಾಂ ತೂಕದ ಕಲ್ಲು ಏಡಿ ಬೆಳೆದಿದ್ದು, ಈ ವ್ಯವಸ್ಥೆಯ ಮೂಲಕ ಇವುಗಳನ್ನು ದೊಡ್ಡ ಮಟ್ಟದಲ್ಲೂ ಬೆಳೆಯಬಹುದು ಅನ್ನೋದನ್ನು ತೋರಿಸಿಕೊಟ್ಟಿದೆ.
RAS ಆಧಾರಿತ ಕಲ್ಲು ಏಡಿಗಳ ಸಾಕಾಣಿಕೆಯು ಸಿಂಗಾಪುರ, ಮಲೇಷ್ಯಾ ಮತ್ತು ವಿಯೆಟ್ನಾಂ ದೇಶಗಳಲ್ಲಿ ಜನಪ್ರಿಯವಾಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿಯೂ ಆರಂಭಗೊಂಡಿದೆ. ಏಡಿ ಸಾಕಾಣಿಕೆ ಮಾಡುವುದರ ಜೊತೆಗೆ ಇತರರಿಗೂ ಸುಧಾರಿತ RAS ಮತ್ತು ನೀರು ಶುದ್ಧೀಕರಣ ತಂತ್ರಜ್ಞಾನಗಳ ಬಗ್ಗೆ ತರಬೇತಿ ಕಾರ್ಯಾಗಾರಗಳನ್ನೂ ಭರತ್ ನಡೆಸುತ್ತಾರೆ.ಮುಂದಿನ ದಿನಗಳಲ್ಲಿ ಮಣ್ಣು ಏಡಿ ಬೆಳೆಯುವ ಒಂದು ಸಮುದಾಯಿಕ ವ್ಯವಸ್ಥೆಯನ್ನೇ ಮಾಡುವ ಯೋಜನೆಯನ್ನು ಹಾಕಿಕೊಂಡಿರುವ ಭರತ್ “ಮೀನುಗಾರಿಕೆ ಕ್ಷೇತ್ರವು ಹಲವು ಸವಾಲುಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ಇಂತಹ ಹೊಸತನಗಳು ಆರ್ಥಿಕ ಸ್ಥಿರತೆ ಮತ್ತು ಶಾಶ್ವತ ಸಮುದ್ರ ಆಹಾರ ಉತ್ಪಾದನೆಗೆ ಸಮರ್ಥ ಮಾರ್ಗಗಳಾಗಿ ಮೂಡಿಬರಲಿದೆ ಎಂದು ವಿಶ್ವಾವನ್ನೂ ವ್ಯಕ್ತಪಡಿಸಿದ್ದಾರೆ.