LATEST NEWS
ದೈವದ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದ ಮಂಗಳೂರು ಎಸ್‌ಇಝೆಡ್ ಕಂಪನಿ – ಭಾರೀ ಆಕ್ರೋಶ

ಮಂಗಳೂರು ಫೆಬ್ರವರಿ 27: ದೈವಾರಾಧನೆ ವಿಚಾರಕ್ಕೆ ಇದೀಗ ಎಂಎಸ್ ಇಝೆಡ್ ಮತ್ತೆ ಸುದ್ದಿಯಲ್ಲಿದೆ. ಬಜಪೆ ಗ್ರಾಮದ ನೆಲ್ಲಿದಡಿಗುತ್ತಿನ ದೈವ ಕಾಂತೇರಿ ಜುಮಾದಿ ಸ್ಥಾನಕ್ಕೆ ತೆರಳಿ ನಿತ್ಯ ಆರಾಧನೆಗೆ ಮುಂದಿನ ದಿನಗಳಿಂದ ಅವಕಾಶವನ್ನು ನಿರಾಕರಿಸುವ ಮೂಲಕ ಮಂಗಳೂರು ಎಸ್‌ಇಝೆಡ್ ಕಂಪನಿ ತುಳುನಾಡಿನ ಆಸ್ಮಿತೆ, ನಂಬಿಕೆ ಮೇಲೆ ಸವಾರಿ ಮಾಡಲು ಹೊರಟಿದೆ.
ಮಂಗಳೂರಿನಲ್ಲಿ ಸರ್ಕಾರಿ ಸ್ವಾಮ್ಯದ ಕಂಪೆನಿಯೊಂದು ತುಳುನಾಡಿನ ದೈವಾರಾಧನೆಗೆ ತಡೆಯೊಡ್ಡುವ ಮೂಲಕ ಭಾರೀ ವಿವಾದ ಸೃಷ್ಟಿಸಿದೆ. ಮಂಗಳೂರಿನಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯದ ನಡೆ ಸದ್ಯ ಭಾರೀ ವಿವಾದ ಸೃಷ್ಟಿಸಿದೆ. ಎಂಎಸ್ಇಝಡ್ ವ್ಯಾಪ್ತಿಯಲ್ಲಿರೋ ಕಾಂತೇರಿ ಜುಮಾದಿ ದೇವಸ್ಥಾನದ ಆಚರಣೆಗೆ ಎಂಎಸ್ಇಝಡ್ ಅಧಿಕಾರಿಗಳು ತಡೆ ಒಡ್ಡಿದ ಆರೋಪ ಕೇಳಿ ಬಂದಿದೆ. ಮಂಗಳೂರು ಹೊರವಲಯದ ಬಜಪೆ ಗ್ರಾಮದ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೈವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದೆ.

2006ರಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಸಾವಿರಾರು ಎಕರೆ ಜನವಸತಿ ಜಾಗ ಸರ್ಕಾರದಿಂದ ಭೂ ಸ್ವಾಧೀನವಾಗಿತ್ತು. ಬಜ್ಪೆ, ಬಾಳ, ಕುತ್ತೆತ್ತೂರು, ಪೆರ್ಮುದೆ ಕಳವಾರು ಗ್ರಾಮದ ಸಾವಿರಾರು ಎಕರೆ ಭೂ ಸ್ವಾಧೀನವಾಗಿತ್ತು. ಸಮೃದ್ಧ ಗದ್ದೆಗಳು, ಸಾವಿರಾರು ನಾಗಬನಗಳು, ಬ್ರಹ್ಮಸ್ಥಾನಗಳು, ದೈವದ ಗುಡಿಗಳು, ಕೆರೆ, ತೊರೆ, ಶಾಲೆ, ಚರ್ಚು, ಮಸೀದಿ ಸಾವಿರಾರು ಮನೆಗಳು ಭೂ ಸ್ವಾಧೀನಕ್ಕೆ ನೆಲಸಮವಾಗಿತ್ತು. ಆದರೆ 800 ವರ್ಷಗಳ ಇತಿಹಾಸವಿದ್ದ ನೆಲ್ಲಿದಡಿ ಗುತ್ತಿನ ದೇವಸ್ಥಾನ ಮುಟ್ಟಲಾಗಲಿಲ್ಲ. ನೆಲ್ಲಿದಡಿ ಗುತ್ತಿನ ಪೂರ್ತಿ ಜಾಗವನ್ನು ಕಂಪನಿ ಬಲಾತ್ಕಾರದಿಂದ ತನ್ನ ಹೆಸರಿಗೆ ಬರೆಸಿಕೊಂಡರೂ ದೈವಸ್ಥಾನ ಮಟ್ಟಲಾಗಲಿಲ್ಲ. ಯಾವ ಕಾರಣಕ್ಕೂ ನಾನು ಈ ಮಣ್ಣನ್ನು ಬಿಡುವುದಿಲ್ಲ ಎಂದು ದೈವ ನುಡಿದ ಕಾರಣ ಸಾವಿರಾರು ಎಕರೆ ಕೈಗಾರಿಕಾ ಪ್ರದೇಶದಲ್ಲಿ ಏಕಾಂಗಿಯಾಗಿ ಕಾಂತೇರಿ ಜುಮಾದಿ ದೈವದ ದೈವಸ್ಥಾನ ಈಗಲೂ ಇದೆ. 2016ರಲ್ಲಿ ಕಂಪನಿ ಮತ್ತೊಮ್ಮೆ ನೆಲ್ಲಿದಡಿ ಗುತ್ತನ್ನು ನೆಲಸಮ ಮಾಡಲು ಯತ್ನಿಸಿದರೂ ಆಗಲಿಲ್ಲ. ಕೊನೆಗೆ ಅಂದಿನ ಜಿಲ್ಲಾಧಿಕಾರಿ ದೈವಸ್ಥಾನವನ್ನು ಒಂದು ಸ್ಮಾರಕದ ಹಾಗೆ ಉಳಿಸಿಕೊಳ್ಳುವ ಭರವಸೆ ನೀಡಿದ್ದರು.
ಮಂಗಳೂರು ಎಸ್‌ಇಝೆಡ್ ಕಂಪನಿಯು ಭೂ ಸ್ವಾಧೀನದ ವೇಳೆ ನೆಲ್ಲಿದಡಿ ಗುತ್ತಿನ 22 ಮನೆಗಳ ಸ್ಥಳಾಂತರ ಮಾಡಲು ಮನವೊಲಿಸುವ ಸಭೆಯಲ್ಲಿ ದೈವಕ್ಕೆ ನಿತ್ಯ ಹೂ ನೀರು, ಸಂಕ್ರಮಣ, ದೀಪಾವಳಿ, ಚೌತಿ, ಅಷ್ಟಮಿ, ಮಾರಿ ಉತ್ಸವ, ಬಂಡಿ ಉತ್ಸವ, ಚಾವಡಿ ನೇಮ, ಕುಟುಂಬದಲ್ಲೆ ಮೃತಪಟ್ಟರೆ ಅದರ ಕಾರ್ಯಕ್ರಮ ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡಲು ಅವಕಾಶ ನೀಡುವುದಾಗಿ ಭರವಸೆ ನೀಡಲಾಗಿತ್ತು. 2016ರ ಡಿಸೆಂಬರ್‌ನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಇದೇ ತೀರ್ಮಾನಕ್ಕೆ ಬರಲಾಗಿತ್ತು.
ಅದರಂತೆ ನೆಲ್ಲಿದಡಿಗುತ್ತು ಹಾಗೂ ಊರಿನವರು ಎಂಎಸ್‌ಇಝೆಡ್ ಅಧಿಕಾರಿಗಳಿಗೆ ಮಾಹಿತಿ ನೀಡಿ, ದೈವಸ್ಥಾನಕ್ಕೆ ತೆರಳಿ ಸೇವಾ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದರು. ಆದರೆ ಫೆ.12ರಂದು ಸಂಕ್ರಮಣ ಸೇವೆ ಮಾಡಲು ತೆರಳಲು ಮನವಿ ಪತ್ರ ನೀಡುವ ವೇಳೆ ಇದು ಕೊನೆಯ ಅವಕಾಶವಾಗಿದ್ದು, ಮುಂದಿನ ದಿನಗಳಿಂದ ಆರಾಧನೆಗೆ ಅವಕಾಶ ಇರುವುದಿಲ್ಲ ಎಂದು ಎಂಎಸ್‌ಇಝೆಡ್ ಕಂಪನಿ ಅಧಿಕಾರಿಗಳು ಹೇಳಿದ್ದಾರೆ.
ತುಳುನಾಡಿನ ಅತ್ಯಂತ ಪ್ರಸಿದ್ಧ ದೈವಸ್ಥಾನದಲ್ಲಿ ದೈವಕ್ಕೆ ಹೂವು ನೀರು ಇಡಲು ನಿರ್ಬಂಧ ಹೇರಲಾಗಿದೆ. ಸದ್ಯ ಕಂಪೆನಿ ಅಧಿಕಾರಿಗಳ ನಡೆಯ ವಿರುದ್ದ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ನೆಲ್ಲಿದಡಿ ಗುತ್ತು ಉಳಿಸಿ ಹೆಸರಿನಲ್ಲಿ ಭಾರೀ ಅಭಿಯಾನ ಆರಂಭವಾಗಿದೆ.