DAKSHINA KANNADA
ಪಲ್ಗುಣಿ ನದಿ ಕಲುಶಿತಕ್ಕೆ ಎಂಆರ್‌ಪಿಎಲ್ ನೇರ ಹೊಣೆ, ಜಿಲ್ಲಾಧಿಕಾರಿ ಮಧ್ಯ ಪ್ರವೇಶಕ್ಕೆ ನಾಗರಿಕ ಹೋರಾಟ ಸಮಿತಿ ಆಗ್ರಹ..!
ಮಂಗಳೂರು : ಕಲುಶಿತಗೊಳ್ಳುತ್ತಿರುವ ಪಲ್ಗುಣಿ ನದಿ ಉಳಿಸಿ ಅಭಿಯಾನದೊಂದಿಗೆ ಹೋರಾಟ ನಡೆಸುತ್ತಿರುವ ಸುರತ್ಕಲ್ ನಾಗರಿಕ ಹೋರಾಟ ಸಮಿತಿ ಮಂಗಳವಾರ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು ನದಿ ಕಲುಶಿತಕ್ಕೆ ತೈಲ ಸಂಸ್ಕರಣ ಕಂಪೆನಿ ಎಂಆರ್‌ಪಿಎಲ್ ನೇರ ಹೊಣೆ ಎಂದು ಆರೋಪಿಸಿದೆ.
ಕಳೆದ ಮೂರು ವಾರಗಳಿಂದ ಕಪ್ಪು ಬಣ್ಣಕ್ಕೆ ತಿರುಗಿ ನಾರುತ್ತಿದ್ದ ಪಲ್ಗುಣಿಯ ಕವಲು ತೋಕೂರು ಹಳ್ಳದಲ್ಲಿ ಮಂಗಳವಾರ ನೀರಿನ ಬಣ್ಣ ಕೆಂಪು ಮಿಶ್ರಿತಗೊಂಡಿದೆ ಇದರ ಜೊತೆಗೆ ಪೆಟ್ರೋಲಿಯಂನ ಪದರ ನೀರಿನ ಮೇಲ್ಭಾಗದಲ್ಲಿ ಎದ್ದು ಕಾಣುತ್ತಿದೆ. ಜನ ವಸತಿ ಭಾಗದ ತೆರೆದ ಚರಂಡಿಗಳಿಂದ ನೀರು ಹರಿದರೆ ನೀರು ಈ ಬಣ್ಣಕ್ಕೆ ತಿರುಗಲು ಸಾಧ್ಯವಿಲ್ಲ ಮತ್ತಿ ಈ ಭಾಗದಲ್ಲಿ ಜನವಸತಿ ಪ್ರದೇಶವೇ ಇಲ್ಲ.
ಪಲ್ಗುಣಿಯ ಮೇಲೆ ಮಾರಕ ಮಾಲಿನ್ಯದ ದೌರ್ಜನ್ಯ ನಡೆಯುತ್ತಿರುವುದು ಬಹಿರಂಗಗೊಂಡಿದ್ದರೂ, ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದರೂ ಜಿಲ್ಲಾಧಿಕಾರಿಗಳು ಮೌನ ವಹಿಸಿರುವುದು ಖಂಡನೀಯವಾಗಿದ್ದು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇನ್ನಾದರು ಮೌನ ಮುರಿಯಲಿ ಎಂದು ಸುರತ್ಕಲ್ ನಾಗರಿಕ ಹೋರಾಟ ಸಮಿತಿ ಮನೀರ್ ಕಾಟಿಪಳ್ಳ ಆಗ್ರಸಿದ್ದಾರೆ.