Connect with us

LATEST NEWS

ಅಪರಾಧಿಗಳು ಪೊಲೀಸರ ಭಯವಿಲ್ಲದೆ ವರ್ತಿಸುತ್ತಿದ್ದು, ರಾಜ್ಯದಲ್ಲಿ ಚಿಂತಾಜನಕ ಪರಿಸ್ಥಿತಿ ನಿರ್ಮಾಣ – ಸಂಸದ ಕ್ಯಾ. ಬ್ರಿಜೇಶ್ ಚೌಟ ಆಕ್ರೋಶ

ಮಂಗಳೂರು ಜನವರಿ 17: ಸಿಎಂ ಸಿದ್ದರಾಮಯ್ಯನವರು ಮಂಗಳೂರಿನಲ್ಲಿರುವಾಗಲೇ ಹಾಡಹಗಲೇ ದುಷ್ಕರ್ಮಿಗಳು ಬ್ಯಾಂಕ್ ದರೋಡೆ ನಡೆಸುವ ಮೂಲಕ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಎಷ್ಟಮಟ್ಟಿಗೆ ಹದಗೆಟ್ಟು ಹೋಗಿದೆ ಎಂಬುದರ ಸತ್ಯ ದರ್ಶನದ ಅರಿವು ಕಾಂಗ್ರೆಸ್ ಸರ್ಕಾರಕ್ಕೆ ಆಗಿದ್ದು, ಇದೊಂದು ಅತ್ಯಂತ ಆತಂಕ ಹಾಗೂ ನಾಚಿಿಕೆ ಗೇಡಿನ ವಿಚಾರ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.


ಉಳ್ಳಾಲದ ಕೋಟೆಕಾರು ಸಹಕಾರಿ ಬ್ಯಾಂಕ್ ಗೆ ದುಷ್ಕರ್ಮಿಗಳ ಗ್ಯಾಂಗ್ ಹಾಡಹಗಲೇ ನುಗ್ಗಿ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ, ಹಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದರು, ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆರೋಪಿಗಳನ್ನು ಕೂಡಲೇ ಪತ್ತೆ ಮಾಡಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆಯೂ ಆಗ್ರಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಮಂಗಳೂರು ಪ್ರವಾಸದಲ್ಲಿರುವ ವೇಳೆಯೇ ಇಷ್ಟೊಂದು ದೊಡ್ಡ ಮಟ್ಟದ ಅಪರಾಧ ಕೃತ್ಯ ನಡೆದಿರುವುದು ನಿಜಕ್ಕೂ ಶೋಚನೀಯ. ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆ, ಮಾಫಿಯಾ ಜಾಸ್ತಿಯಾಗುತ್ತಿದ್ದು, ಈ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿ ಜನರು ಭಯದ ವಾತಾವರಣದಲ್ಲಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಿಲ್ಲ. ಅಷ್ಟೇಅಲ್ಲ, ರಾಜ್ಯದಲ್ಲಿ ದರೋಡೆಕೋರರು, ಸುಲಿಗೆಕೋರರು ಪೊಲೀಸರ ಭಯವಿಲ್ಲದೆ ಎಷ್ಟೊಂದು ರಾಜಾರೋಷವಾಗಿ ಅಪರಾಧ ಕೃತ್ಯ ಎಸಗಿ ಪರಾರಿಯಾಗುತ್ತಿದ್ದಾರೆ ಎನ್ನುವುದರ ವಾಸ್ತವದ ಅರಿವು ಕೂಡ ಸ್ವಯಂ ಸಿದ್ದರಾಮಯ್ಯನವರಿಗೇ ಆಗಿದೆ ಎಂದು ಕ್ಯಾ. ಚೌಟ ಮಾರ್ಮಿಕವಾಗಿ ಹೇಳಿದ್ದಾರೆ.

 

ಬೀದರ್ ನಲ್ಲಿ ಹಾಡಹಗಲೇ ಎಟಿಎಂ ವಾಹನದ ಸಿಬ್ಬಂದಿಯನ್ನು ಡಕಾಯಿತಿ ತಂಡವು ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಿರುವ ಬೆನ್ನಲ್ಲೆ ಕೋಟಕಾರು ಸಹಕಾರಿ ಬ್ಯಾಂಕ್ ನಲ್ಲಿ ದರೋಡೆ ನಡೆದಿದೆ. ಇತ್ತೀಚೆಗೆ ವಿಟ್ಲದ ಬೋಳಂತೂರಿನಲ್ಲಿ ದುಷ್ಕರ್ಮಿಗಳು ವಾಹನ ಮಾಡಿಕೊಂಡು ಬಂದು ಉದ್ಯಮಿಯೊಬ್ಬರ ಮನೆಯಲ್ಲಿ ದರೋಡೆ ಮಾಡಿ ಹೋಗಿದ್ದು, ಆರೋಪಿಗಳ ಪತ್ತೆ ಇನ್ನು ಕೂಡ ಆಗಿಲ್ಲ. ಅತ್ತ ಬೆಂಗಳೂರಿನಲ್ಲಿಯೂ ವಿಕೃತ ಮನಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ಹಸುಗಳ ಕೆಚ್ಚಲು ಕತ್ತರಿಸಿ ಅತ್ಯಂತ ಹೇಯ ಕೃತ್ಯಕ್ಕೆ ಇಡೀ ರಾಜ್ಯ ಸಾಕ್ಷಿಯಾಗಿದೆ. ಇದನ್ನೆಲ್ಲ ಗಮನಿಸುವಾಗ ಈ ಸಿದ್ದರಾಮಯ್ಯ ಸರ್ಕಾರದಲ್ಲಿ ಬರೀ ದರೋಡೆಕೋರರು, ಸಮಾಜಘಾತುಕ ಶಕ್ತಿಗಳೇ ಅಟ್ಟಹಾಸ ಮೆರೆಯುತ್ತಿದ್ದು, ಇಡೀ ಗೃಹ ಇಲಾಖೆ ಜನರ ಭದ್ರತೆ ಕಾಪಾಡುವಲ್ಲಿ ಸಂಪೂರ್ಣ ವಿಫಲಗೊಂಡಿದೆ ಎಂದು ಸಂಸದರು ಆರೋಪಿಸಿದ್ದಾರೆ.

 

ಸಾಮಾನ್ಯವಾಗಿ ರಾಜ್ಯದ ಮುಖ್ಯಮಂತ್ರಿ ಒಂದು ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ಎಲ್ಲೆಡೆ ಬಿಗಿಭದ್ರತೆ ಇರಬೇಕಾಗುತ್ತದೆ. ಅಲ್ಲಿ ಯಾವುದೇ ರೀತಿಯ ಅಪರಾಧ ಚಟುವಟಿಕೆಗಳು ನಡೆಯದಂತೆ ಪೊಲೀಸರು ಅಲರ್ಟ್ ಇರಬೇಕು. ಆದರೆ, ಹೆಚ್ಚು ಜಾಗ್ರತೆ ವಹಿಸಬೇಕಾದ ಸಮಯದಲ್ಲೇ ರೀತಿ ದರೋಡೆಕೋರರು ಮಾರಕಾಸ್ತ್ರಗಳನ್ನು ಹಿಡಿದು ರಾಜಾರೋಷವಾಗಿ ಬಂದು ಬ್ಯಾಂಕ್ ನುಗ್ಗಿ ದೋಚುತ್ತಾರೆ ಅಂದರೆ ನಮ್ಮ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಎಷ್ಟೊಂದು ಕೈಮೀರಿ ಹೋಗಿದೆ ಎನ್ನುವುದು ಜನಸಾಮಾನ್ಯರಿಗೂ ಅರ್ಥವಾಗುವ ವಿಚಾರ. ಹೀಗಾಗಿ, ಜನರು ಅದರಲ್ಲಿಯೂ ಉದ್ಯಮ-ವ್ಯವಹಾರಗಳಲ್ಲಿ ತೊಡಗಿರುವವರು ಜೀವ ಕೈಯಲ್ಲಿ ಹಿಡಿದು ಬದುಕಬೇಕಾದ ಅತ್ಯಂತ ದುಸ್ಥಿತಿಯ ಗೂಂಡಾರಾಜ್ ಆಡಳಿತವನ್ನು ಸಿದ್ದರಾಮಯ್ಯ ಸರ್ಕಾರ ನೀಡುತ್ತಿದೆ. ಅಪರಾಧಿಗಳು ಪೊಲೀಸರ ಭಯವಿಲ್ಲದೆ ವರ್ತಿಸುತ್ತಿದ್ದು, ರಾಜ್ಯದಲ್ಲಿ ಚಿಂತಾಜನಕ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕ್ಯಾ. ಚೌಟ ಆಕ್ರೋಶ ವ್ಯಕ್ತಪಡಿಸಿದ್ದಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *