LATEST NEWS
ಸ್ಪೀಕರ್ ಖಾದರ್ ಆರು ತಿಂಗಳು ಅಮಾನತು ಮಾಡಿದ್ದು ಸರಿಯಲ್ಲ – ಸಂಸದ ಗೋವಿಂದ ಕಾರಜೋಳ

ಮಂಗಳೂರು ಮಾರ್ಚ್ 22: ಸ್ಪೀಕರ್ ಖಾದರ್ ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವ ರೀತಿಯನ್ನು ಸಂಸದ ಗೋವಿಂದ ಕಾರಜೋಳ ಖಂಡಿಸಿದ್ದಾರೆ. ಅಮಾನತು ಮಾಡುವುದಿದ್ದರೆ ಎರಡು ಅಥವಾ ಮೂರು ದಿನಗಳಿಗೆ ಮಾಡಬಹುದಿತ್ತು, ಆದರೆ ಆರು ತಿಂಗಳಿಗೆ ಮಾಡಿದ್ದು ಸರಿಯಲ್ಲ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ನಮ್ಮ ಶಾಸಕರನ್ನು ಸಮರ್ಥನೆ ಮಾಡಿಕೊಳ್ತಾ ಇಲ್ಲ, ಆದರೆ ಅಮಾನತು ಮಾಡುವಾಗ ಆರು ತಿಂಗಳು ಮಾಡಬಾರದಿತ್ತು, ಎರಡು ಮೂರು ದಿನಗಳ ಕಾಲ ಅಮಾನತು ಮಾಡಬಹುದಿತ್ತು, ಲೋಕಸಭೆಯಲ್ಲೂ ಅಮಾನತು ಮಾಡ್ತಾರೆ, ಆದರೆ ನಾಲ್ಕೈದು ದಿನ ಮಾಡ್ತಾರೆ, ಆದರೆ ಆರು ತಿಂಗಳು ಯಾರೂ ಮಾಡುವುದಿಲ್ಲ ಎಂದರು. ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿ ಶೂನ್ಯ ಅಸಮರ್ಥ ಸರ್ಕಾರವಾಗಿದ್ದು. ಸಿದ್ದರಾಮಯ್ಯ ಅಹಿಂದ ನಾಯಕ ಅಂತ ಬಡಾಯಿ ಕೊಚ್ಚಿಕೊಳ್ತಾರೆ, ಆದರೆ ಸಿದ್ದರಾಮಯ್ಯ ಒಬ್ಬ ದೊಡ್ಡ ಮೋಸಗಾರ, ದಲಿತರ ಅನುದಾನ ಬೇರೆ ಉದ್ದೇಶಕ್ಕೆ ಬಳಸಿಕೊಂಡು ಅನ್ಯಾಯ ಮಾಡಿದ್ದಾರೆ.

ಮೊನ್ನೆ ಮಂಡಿಸಿದ ಬಜೆಟ್ ನಲ್ಲೂ 42 ಸಾವಿರ ಕೋಟಿ ಮೀಸಲಿಟ್ಟಿದ್ದೇನೆ ಅಂದಿದ್ದಾರೆ, ಆದರೆ ಇದರಲ್ಲಿ ಸಿಗೋದು ಕೇವಲ ಏಳು ಸಾವಿರ ಕೋಟಿ, ಉಳಿದ 50% ಇಲಾಖೆಗಳಿಗೆ ಹೋಗುತ್ತೆ, ಗ್ಯಾರಂಟಿ ಸ್ಕೀಮ್ ಗೆ ಹೋಗುತ್ತೆ, ಇದು ದೊಡ್ಡ ಮೋಸ ಅಲ್ಲದೇ ಮತ್ತೇನೂ ಅಲ್ಲ ಎಂದರು.
ಮುಸಲ್ಮಾನ ಹೆಣ್ಮಕ್ಕಳಿಗೆ ಪ್ರತ್ಯೇಕ ಕಾಲೇಜು ಮಾಡ್ತೀನಿ ಅಂತ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಇದೆಲ್ಲಾ ಜಾತಿ-ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ, ಓಟ್ ಬ್ಯಾಂಕ್ ರಾಜಕಾರಣಕ್ಕೆ ಮುಸ್ಲಿಮರ ಪ್ರತ್ಯೇಕ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಧರ್ಮದ ಆಧಾರದಲ್ಲಿ ಮೀಸಲಾತಿ ದಯವಿಟ್ಟು ಕೊಡಬೇಡಿ, ಅಂಬೇಡ್ಕರ್ ಸಂವಿಧಾನದಲ್ಲಿ ಹಿಂದುಳಿದವರನ್ನ ಮೇಲೆತ್ತುವ ಕೆಲಸ ಅಗಬೇಕು ಅಂತ ಇದೆ, ಅದರೆ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಒಡೆದು ಆಳಲಾಗ್ತಿದೆ.
ವಿಧಾನಸಭೆಯ ಒಳಗಡೆ ಪಕ್ಷದ ಹಿರಿಯ ಸಚಿವರೇ ಹನಿಟ್ರ್ಯಾಪ್ ಆಗಿದೆ ಅಂತಾರೆ, ಮತ್ತೊಬ್ಬರು ಹೇಳ್ತಾರೆ 48 ಜನರ ಮೇಲೆ ಆಗಿದೆ ಅಂತ, ಒಂದು ಕಡೆ ಭ್ರಷ್ಟ ಸರ್ಕಾರ, ಮತ್ತೊಂದು ಕಡೆ ಅನೈತಿಕ ಸರ್ಕಾರ, ಲೈಂಗಿಕ ಹಗರಣಗಳಲ್ಲಿ ಸಿಲುಕಿರೋ ಭ್ರಷ್ಡ ಸರ್ಕಾರ ಇದಾಗಿದೆ. ಈ ಹಿನ್ನಲೆ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಟ್ಟು ಜನರ ಕ್ಷಮೆ ಯಾಚಿಸಲಿ,
ಬಿಜೆಪಿ ಶಾಸಕರು ಅಧಿವೇಶನದಲ್ಲಿ ಧ್ಬನಿಯೆತ್ತಿದ ಕಾರಣಕ್ಕಾಗಿ ಅಮಾನತು ಮಾಡಲಾಗಿದೆ. ಆದರೆ ಪ್ರತಿಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಬೆಂಚ್ ಮೇಲೆ ನಿಂತು ತೊಡೆ ತಟ್ಡಿದ್ದರು. ಬಾಗಿಲು ಮುರಿದು ಒಳ ನುಗ್ಗಿ ಕುಣಿದಾಡಿದ್ರು ಅಲ್ಲದೆ ವಿಧಾನ ಪರಿಷತ್ ನಲ್ಲಿ ಸ್ಪೀಕರ್ ಎಳೆದಾಡುವ ಕೆಲಸ ಮಾಡಿದ್ದರು, ಅಗ ಅವರನ್ನು ಶಾಶ್ವತವಾಗಿ ಅಮಾನತು ಮಾಡಬಹುದಾಗಿತ್ತು, ಆದರೆ ಮಾಡಿಲ್ಲ, ಆದರೆ ಈಗ ಅಧಿಕಾರದ ಮದದಿಂದ ಆರು ತಿಂಗಳು ಅಮಾನತು ಮಾಡಿದ್ದಾರೆ. ನೈತಿಕತೆ ಕಳೆದುಕೊಂಡ ಸರ್ಕಾರ ಈ ರಾಜ್ಯದಲ್ಲಿ ಆಡಳಿತ ನಡೆಸ್ತಾ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.