LATEST NEWS
ನರ್ಸಿಂಗ್ ವಿದ್ಯಾರ್ಥಿಗಳಿಗೂ ಎಂಬಿಬಿಎಸ್ ಮಾದರಿಯಲ್ಲಿ ಇಂಟರ್ನ್ ಶಿಪ್ ಕಡ್ಡಾಯಗೊಳಿಸಿ – ಸಂಸದ ಕ್ಯಾ. ಚೌಟ
ನವದೆಹಲಿ ಫೆಬ್ರವರಿ 07: ಮಂಗಳೂರಿನ ವೆನ್ಲಾಕ್ ಸೇರಿ ದೇಶದೆಲ್ಲೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಎದುರಾಗಿರುವ ನರ್ಸ್ ಗಳ ಕೊರತೆ ನೀಗಿಸಲು ಎಂಬಿಬಿಎಸ್ ಮಾದರಿ ನರ್ಸ್ಗಳಿಗೂ ಇಂಟರ್ನ್ ಶಿಪ್ ಕಡ್ಡಾಯಗೊಳಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಸಂಸತ್ತಿನಲ್ಲಿ ಸದನದ ಗಮನ ಸೆಳೆದಿದ್ದಾರೆ.
ಲೋಕಸಭೆಯಲ್ಲಿ ನಿಯಮ 377ರಡಿ ಈ ವಿಷಯ ಉಲ್ಲೇಖಿಸಿದ ಕ್ಯಾ. ಚೌಟ ಅವರು, 905 ಹಾಸಿಗೆಗಳ ವೆನ್ಲಾಕ್ ಆಸ್ಪತ್ರೆಯಲ್ಲಿ ದಾದಿಯರ ಕೊರತೆ ಕಾಡುತ್ತಿದೆ. ಸರ್ಕಾರಿ ಮಾರ್ಗಸೂಚಿ ಪ್ರಕಾರ ಇಲ್ಲಿ 483 ನರ್ಸಿಂಗ್ ಸಿಬ್ಬಂದಿ ಅಗತ್ಯವಿದ್ದು, ಪ್ರಸ್ತುತ ಕೇವಲ 265 ಶುಶ್ರೂಷಕಿಯರು ಸೇವೆ ಸಲ್ಲಿಸುತ್ತಿದ್ದಾರೆ. ವೆನ್ಲಾಕ್ನಲ್ಲಿ ನುರಿತ, ಅನುಭವಿ ವೈದ್ಯರ ತಂಡ ಕಾರ್ಯನಿರ್ವಹಿಸುತ್ತಿದ್ದರೂ ನರ್ಸ್ ಗಳ ಕೊರತೆಯಿಂದಾಗಿ ರೋಗಿಗಳಿಗೆ ಪೂರ್ಣ ಪ್ರಮಾಣದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಹಿನ್ನಡೆಯಾಗುತ್ತಿದೆ ಎಂದು ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಗಮನಕ್ಕೆ ತಂದಿದ್ದಾರೆ.
ವೆನ್ಲಾಕ್ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಸರ್ಕಾರಿ ಆಸ್ಪತ್ರೆಯಾಗಿದ್ದು, ಕೇವಲ ಇಲ್ಲಿ ಮಾತ್ರ ಶುಶ್ರೂಷಕಿಯರ ಕೊರತೆ ಇರುವುದಲ್ಲ; ದೇಶದೆಲ್ಲೆಡೆ, ಅದರಲ್ಲಿಯೂ ಗ್ರಾಮೀಣ ಭಾರತದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ದಾದಿಯರ ಕೊರತೆ ಎದುರಿಸುತ್ತಿರುವ ಬಗ್ಗೆ ಅನೇಕ ವರದಿಗಳು ಪ್ರಕಟಗೊಂಡಿವೆ. ಇಂಥ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಅನಿವಾರ್ಯವಾಗಿ ರೋಗಿಗಳು ಸೂಕ್ತ ತರಬೇತಿ ಪಡೆಯದ ಪರಿಚಾರಕರನ್ನು ಅವಲಂಬಿಸಬೇಕಾಗಿ ಬರುತ್ತದೆ. ಇದು ರೋಗಿಗಳ ಚಿಕಿತ್ಸೆ ಹಾಗೂ ಆರೈಕೆ ಗುಣಮಟ್ಟದ ಮೇಲೂ ಪರಿಣಾಮ ಬೀರಬಹುದು ಎಂದು ಹೇಳಿದರು.
ನರ್ಸಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಕಡ್ಡಾಯಗೊಳಿಸಿ
ಎಂಬಿಬಿಎಸ್ ಪದವಿ ಪಡೆದವರಿಗೆ ಗ್ರಾಮೀಣ ಭಾಗದಲ್ಲಿ ತರಬೇತಿ ಕಡ್ಡಾಯಗೊಳಿಸಿರುವಂತೆಯೇ ಗ್ರಾಮೀಣ ಭಾಗದ ಜನರ ಆರೋಗ್ಯದ ದೃಷ್ಟಿಯಿಂದ ನರ್ಸಿಂಗ್ ವಿದ್ಯಾರ್ಥಿಗಳಿಗೂ ಇಂಟರ್ನ್ಶಿಪ್ ಜಾರಿಗೊಳಿಸಬೇಕು. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಭಾರತೀಯ ನರ್ಸಿಂಗ್ ಕೌನ್ಸಿಲ್ಗೆ ಮನವಿ ಮಾಡಬೇಕು. ಇದು ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವನ್ನು ಒದಗಿಸುವುದಲ್ಲದೆ, ಭಾರತದ ಸರ್ಕಾರಿ ಆಸ್ಪತ್ರೆಗಳಲ್ಲಿ ದಾದಿಯರ ಸೇವಾ ಗುಣಮಟ್ಟ ವೃದ್ಧಿಗೂ ಸಹಕಾರಿಯಾಗಲಿದೆ. ಜತೆಗೆ, ರೋಗಿಗಳಿಗೂ ಉತ್ತಮ ರೀತಿಯ ಆರೈಕೆ ದೊರೆಯುತ್ತದೆ ಎಂದು ಕ್ಯಾ. ಚೌಟ ಇದೇ ವೇಳೆ ಸಲಹೆ ನೀಡಿದ್ದಾರೆ.