Connect with us

    DAKSHINA KANNADA

    ಭಾರತದ ಅಭಿವೃದ್ಧಿಯ ಪರ್ವ ಕಾಲದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಪುಣ್ಯ – ಸಂಸದ ಕ್ಯಾ. ಬ್ರಿಜೇಶ್ ಚೌಟ

    ಪುತ್ತೂರು ಅಗಸ್ಟ್ 16: ಭಾರತದ ಅಭಿವೃದ್ಧಿಯ ಪರ್ವ ಕಾಲದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಪುಣ್ಯ. ಮುಖ್ಯವಾಗಿ ಯುವ ಸಮುದಾಯ ದೇಶಕ್ಕಾಗಿ ಕೊಡುಗೆ ನೀಡುವಂತೆ ಸಶಕ್ತರಾಗಬೇಕು. ಅಂತಹ ಅವಕಾಶಗಳನ್ನು ವಿದ್ಯಾಥಿ೯ಗಳು ಕಳೆದುಕೊಳ್ಳಬಾರದು ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.


    ಅವರು ಸವಣೂರು ವಿದ್ಯಾಗಂಗೋತ್ರಿಯ ವಿದ್ಯಾಚೇತನ ಸಭಾಂಗಣದಲ್ಲಿ ಬುಧವಾರ ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್ ಪ್ರವರ್ತಿತ, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸ್ಥಾಪಕ ಶೀಂಟೂರು ನಾರಾಯಣ ರೈಯವರ 13ನೇ ವರ್ಷದ ಸ್ಥಾಪಕರ ದಿನಾಚರಣೆ, ಶೀಂಟೂರು ಸ್ಮೃತಿ, ಶಿಷ್ಯ ವೇತನ ವಿತರಣೆ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

    ಸ್ವಾತಂತ್ರ್ಯಪೂರ್ವದಲ್ಲಿ ಸೈನಿಕರಾಗಿದ್ದ ಶೀಂಟೂರು ನಾರಾಯಣ ರೈ ಅವರ ಹೆಸರಿನಲ್ಲಿ ವಿದ್ಯಾದಾನ ಮಾಡುತ್ತಿರುವುದು ಪ್ರೇರಣಾದಾಯಿಯಾಗಿದೆ ಎಂದರು. ಸೈನಿಕನ ಮಾನಸಿಕತೆಯು ವಿಶೇಷವಾಗಿದ್ದು, ದೇಶದ ವಿಚಾರ ಬಂದಾಗ ಸ್ವಾರ್ಥವನ್ನು ಮರೆತು ಇಡೀ ಸಮಾಜವನ್ನು ಒಂದಾಗಿ ಕೊಂಡೊಯ್ಯುವ ಮನೋಭಾವ ಸೈನಿಕರದ್ದಾಗಿದೆ. ಒಮ್ಮೆ ಸೈನಿಕನಾದಲ್ಲಿ ಜೀವನಪೂರ್ತಿ ಆತ ಅಂತಹ ಮನೋಸ್ಥಿತಿಯನ್ನು ಬೆಳೆಸಿಕೊಳ್ಳುತ್ತಾನೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಮಾಜ ವಿಫಲವಾಗಿದೆ. ಭಾರತಕ್ಕೆ ಸೈನಿಕನ ಮನಸ್ಥಿತಿಯ ಚಿಂತನೆಯ ಅವಶ್ಯಕತೆಯಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸೈನಿಕನ ಮನೋಸ್ಥಿತಿಯನ್ನು ಬೆಳೆಸಿಕೊಂಡಲ್ಲಿ ಅವರ ಮುಂದಿನ ಭವಿಷ್ಯ ಉತ್ತಮವಾಗಲಿದೆ. ನಮ್ಮ ಸಂಸ್ಕೃತಿಯು ಶ್ರೇಷ್ಠವಾಗಿದೆ. ಅದಕ್ಕಾಗಿ ಭಾರತ ವಿಶ್ವಗುರುವಾಗಿದೆ ಎಂದರು.

    ಶೀಂಟೂರು ಸಂಸ್ಮರಣೆ ಮಾಡಿದ ಕ.ಸಾ.ಪ. ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು, ಶೀಂಟೂರು ನಾರಾಯಣ ರೈಗಳು ಯೋಧನಾಗಿ, ಶಿಕ್ಷಕ, ಸಹಕಾರಿ, ಕೃಷಿಕ ಹೀಗೆ ಹಲವು ಕ್ಷೇತ್ರಗಳಲ್ಲಿನ ಸಾಧನೆಗಳ ಸಾಧಕರಾಗಿದ್ದರು. ಸ್ವಾತಂತ್ರ್ಯದ ಬಳಿಕ ಗಾಂಧೀಜಿ ಅವರ ಪ್ರೇರಣೆಯಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಕೃಷಿಯಲ್ಲಿಯೂ ತಾಂತ್ರಿಕತೆ ಮತ್ತು ಸಹಕಾರಿ ತತ್ವವನ್ನು ಅಳವಡಿಕೊಂಡಿದ್ದರು. ಬೋರ್ಡು ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಶಿಕ್ಷಕರ ದತ್ತಿನಿಧಿಯನ್ನು ಆರಂಭಿಸಿದ ಹೆಗ್ಗಳಿಗೆ ಶೀಂಟೂರು ನಾರಾಯಣ ರೈಗಳಿಗೆ ಸಲ್ಲುತ್ತದೆ ಎಂದರು. ಈ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ರೂಪಕಲಾ ಕೆ. ಅವರಿಗೆ `ಶೀಂಟೂರು ಸನ್ಮಾನ’ ಪ್ರದಾನಿಸಿ ಗೌರವಿಸಲಾಯಿತು.

    ಸೇನೆಗೆ ನೀಡುವ ಗೌರವಾರ್ಥ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಸನ್ಮಾನಿಸಲಾಯಿತು. ಇದೆ ಸಂದರ್ಭದಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳಾದ ಮಹಮ್ಮದ್ ಝಯಾನ್, ಮನ್ವಿತ್ ಎಚ್. ಆಚಾರ್ಯ, ಕೃಪಾಲಿ ಎಸ್. ಡಿ, ಜಶ್ವಿತ್ ಕೆ., ಆಝ್ಮಿಯತ್ ಸಫಾ, ಕೆ. ಯಶಸ್ವಿ ರೈ, ಯಶ್ವಿನಿ ಪಿ. ಆರ್, ಶಿಲ್ಪ ಎನ್. ಮತ್ತು ಶೀಲ ಕೆ. ಡಿ. ಅವರಿಗೆ `ಶೀಂಟೂರು ಶಿಷ್ಯ ವೇತನ’ ನೀಡಿ ಪುರಸ್ಕರಿಸಲಾಯಿತು.

    ವೇದಿಕೆಯಲ್ಲಿ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸಹಕಾರಿ ರತ್ನ ಸವಣೂರು ಕೆ.ಸೀತಾರಾಮ ರೈ, ಅಧ್ಯಕ್ಷತೆ ವಹಿಸಿದ ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ,ದ.ಕ. ಮತ್ತು ಉಡುಪಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ನಡುಮನೆ, ಬಳ್ಳಾರಿ ಕುಮಾರಸ್ವಾಮಿ ಮಿನರಲ್ ಎಕ್ಸ್ಪೋರ್ಟ್ಸ್ನ ಮಾಲಕ ಮಲಾರ್‌ಬೀಡು ರವೀಂದ್ರನಾಥ ಆಳ್ವ, ಗುಜರಾತ್‌ನ ಗ್ರೀನ್ ಹೀರೋ ಆಫ್ ಇಂಡಿಯಾದ ಫಾರೆಸ್ಟ್ ಕ್ರಿಯೇಟರ್‌ನ ಸಹ ಸ್ಥಾಪಕ ಡಾ. ಆರ್. ಕೆ. ನಾಯರ್, ಎಸ್.ಎನ್.ಆರ್.ರೂರಲ್ ಎಜ್ಯುಕೇಶನ್ ಟ್ರಸ್ಟ್ನ ವಿಶ್ವಸ್ಥರಾದ ಎನ್. ಸುಂದರ ರೈ ನಡುಮನೆ, ಎನ್. ಸುಧಾಕರ ರೈ, ರಶ್ಮೀ ಅಶ್ವಿನ್ ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ., ವಿದ್ಯಾರಶ್ಮಿ ಸ್ವತಂತ್ರ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ,ಜಯಪ್ರಕಾಶ್ ರೈ ಉಪನ್ಯಾಸಕಿ ಪ್ರತಿಭಾ ಎಸ್. ಸವಣೂರು ಉಪಸ್ಥಿತರಿದ್ದರು

    Share Information
    Advertisement
    Click to comment

    Leave a Reply

    Your email address will not be published. Required fields are marked *