KARNATAKA
ಅಪಘಾತದಲ್ಲಿ ಮಗ ಸಾವು – ಮೃತದೇಹ ಸಿಗುವ ಮುನ್ನವೇ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

ಚಿಕ್ಕಮಗಳೂರು ಜುಲೈ 25: ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಭದ್ರಾ ನದಿಗೆ ಬಿದ್ದು ಅದರಲ್ಲಿದ್ದ ಯುವಕನೊಬ್ಬ ನಾಪತ್ತೆಯಾಗಿದ್ದ, ಇದೀಗ ಆತನ ಮೃತದೇಹ ಸಿಗುವ ಮೊದಲೇ ಆತನ ತಾಯಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕೊಳಮಾಗೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನ ರವಿಕಲಾ (48) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಭದ್ರಾ ನದಿಗೆ ಬಿದ್ದ ಪರಿಣಾಮ ರವಿಕಲಾ ಪುತ್ರ ಶಮಂತ್ (23) ಸಾವನ್ನಪ್ಪಿದ್ದ.

ಮಲೆನಾಡಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಪಿಕಪ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯೊಡೆದು ಪಕ್ಕದಲ್ಲೇ ಹರಿಯುತ್ತಿದ್ದ ಭದ್ರಾ ನದಿಗೆ ಉರುಳಿ ಬಿದ್ದು ಶಮಂತ್ ಸಾವನ್ನಪ್ಪಿದ್ದ. ಶಮಂತ್ ಪಿಕಪ್‌ನಲ್ಲಿ ಕಾಫಿ ತೋಟಕ್ಕೆ ಕಾರ್ಮಿಕರ ಟ್ರಿಪ್ ಹೊಡೆಯುತ್ತಿದ್ದ. ಗುರುವಾರ ಸಂಜೆ ಬಾಡಿಗೆ ಇದೆ ಎಂದು ಕಳಸಕ್ಕೆ ಬಂದು ವಾಪಸ್ ಗ್ರಾಮಕ್ಕೆ ಹೋಗುವಾಗ ಈ ಅವಘಡ ಸಂಭವಿಸಿತ್ತು.
ನಿರಂತರ ಮಳೆ ಸುರಿಯುತ್ತಿದ್ದರಿಂದ ಭದ್ರಾ ನದಿಯಿಂದ ಜೀಪ್ ಮೇಲೆತ್ತುವ ಕಾರ್ಯಾಚರಣೆಗೂ ತೊಂದರೆಯಾಗಿತ್ತು. ಭದ್ರಾ ನದಿ ಬಳಿ ಬಂದಿದ್ದ ಶಮಂತ್ ತಾಯಿ ಮಗನ ನೆನೆದು ಕಣ್ಣೀರಿಟ್ಟಿದ್ದರು. ಆದರೆ, ಮಗನ ಮೃತದೇಹ ಸಿಗುವ ಮುನ್ನವೇ ರಾತ್ರಿ ವೇಳೆ ಮನೆಯ ಹಿಂದಿನ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.