LATEST NEWS
ರಷ್ಯಾದ ಸಂಗೀತ ಕಾರ್ಯಕ್ರಮದ ಮೇಲೆ ಭಯೋತ್ಪದಕರ ದಾಳಿ 40 ಕ್ಕೂ ಅಧಿಕ ಮೃತ್ಯು..!
ಮಾಸ್ಕೋ : ಸಂಗೀತ ಕಾರ್ಯಕ್ರಮ ನಡೆಯುತಿದ್ದ ಸ್ಥಳಕ್ಕೆ ಭಯೋತ್ಪಾದಕರು ದಾಳಿ ನಡೆಸಿದ ಪರಿಣಾಮ 40 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ರಷ್ಯಾ ದ ಮಾಸ್ಕೋ ನಗರದಲ್ಲಿ ನಡೆದಿದೆ.
ಇತ್ತೀಚಿನ ವರ್ಷಗಳಲ್ಲಿ ರಷ್ಯಾದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಇದಾಗಿದೆ. ನಾಲ್ವರು ಬಂದೂಕುಧಾರಿಗಳು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದರಿಂದ ಭಯಭೀತರಾದ ಜನರು ಪಾರಾಗಲು ದಿಕ್ಕಾಪಾಲಾಗಿ ಓಡಿದರು ಎನ್ನಲಾಗಿದೆ. ಘಟನೆಯ ವೀಡಿಯೊಗಳಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿದ್ದು ದಾಳಿಕೋರರು ಸ್ಫೋಟಕಗಳನ್ನು ಬಳಸಿದ್ದಾರೆ ಎಂದು ವರದಿಯಾಗಿದೆ.
ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ದಾಳಿಯನ್ನು ದೊಡ್ಡ ದುರಂತ ಎಂದಿದ್ದು, ದಾಳಿ ನಡೆದ ಸ್ಥಳಕ್ಕೆ ಕನಿಷ್ಠ 50 ಆಂಬುಲೆನ್ಸ್‌ಗಳನ್ನು ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. “ದಾಳಿಕೋರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಸಂಗೀತ ಕಾರ್ಯಕ್ರಮದ ಸಮಯದಲ್ಲಿ ಹಾಲ್ ನ ಪ್ರವೇಶದ್ವಾರದಿಂದ ಗುಂಡಿನ ಸುರುಮಳೆಗೈದರು. ಬಳಿಕ ಹಾಲ್ ನಲ್ಲಿ ಸ್ಪೋಟವಾಯಿತು” ಎಂದು ತುರ್ತು ಸೇವಾ ವಿಭಾದ ಅಧಿಕಾರಿಗಳು ಹೇಳಿದ್ದಾರೆ. ದಾಳಿಯಲ್ಲಿ ಐದು ಮಂದಿ ಭಾಗಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದು ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ.