LATEST NEWS
ಸುರತ್ಕಲ್ ನೈತಿಕ ಪೊಲೀಸ್ ಗಿರಿ – ಆರು ಮಂದಿ ಪೊಲೀಸ್ ವಶಕ್ಕೆ

ಮಂಗಳೂರು ನವೆಂಬರ್ 16: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದ್ದು, ಭಿನ್ನಕೋಮಿನ ಯುವತಿಯೊಂದಿಗೆ ಯುವಕ ಬೈಕ್ ನಲ್ಲಿ ತೆರಳಿದ್ದಕ್ಕೆ ಹಲ್ಲೆ ನಡೆಸಿದ್ದ ಆರು ಮಂದಿರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪ್ರಹ್ಲಾದ್, ಪ್ರಶಾಂತ್, ಗುರುಪ್ರಸಾದ್, ಪ್ರತೀಶ್, ಭರತ್, ಸುಖೇಶ್ ಎಂದಿು ಗುರುತಿಸಲಾಗಿದೆ.
ಮುಕ್ಕ ಶ್ರೀನಿವಾಸ್ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿ, ಇದೇ ಕಾಲೇಜಿನ ಕ್ರೈಸ್ತ ಸಮುದಾಯದ ವಿದ್ಯಾರ್ಥಿನಿಯ ವಿನಂತಿಯ ಮೇರೆಗೆ ತನ್ನ ಬೈಕ್‌ನಲ್ಲಿ ಸೋಮವಾರ ರಾತ್ರಿ 10 ಗಂಟೆಗೆ ಸುರತ್ಕಲ್ ಸಮೀಪದ ಕಲ್ಯಾಣಿ ಸಿಟಿ ಪರ್ಲ್ ಅಪಾರ್ಟ್‌ಮೆಂಟ್‌ಗೆ ಡ್ರಾಪ್ ಕೊಡಲು ಹೊರಟಿದ್ದರು. ಈ ಸಂದರ್ಭ ಈ ಇಬ್ಬರು ವಿದ್ಯಾರ್ಥಿಗಳನ್ನು ಬೈಕ್‌ಗಳಲ್ಲಿ ಹಿಂಬಾಲಿಸಿಕೊಂಡು ಬಂದ ಆರು ಮಂದಿ ಯುವಕರು ತಡೆದು ನಿಲ್ಲಿಸಿ ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆಗೈದಿದ್ದಾರೆ. ಅಲ್ಲದೆ ವಿದ್ಯಾರ್ಥಿನಿಯ ಮೈಮೇಲೆ ಕೈ ಹಾಕಿ ಆಕೆಯನ್ನು ಎಳೆದಾಡಿ ಅಶ್ಲೀಲವಾಗಿ ವರ್ತಿಸಿ ಮಾನಹಾನಿ ಎಸಗಿದ್ದಾರೆ ಮತ್ತು ಜೀವಬೆದರಿಕೆ ಹಾಕಿದ್ದಾರೆ ಎಂದು ಸುರತ್ಕಲ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ಇದೇ ರೀತಿ ಯುವಕರ ತಂಡವೊಂದು ಮಲ್ಪೆ ಬೀಚ್‌ನಿಂದ ಬರುತ್ತಿದ್ದ ಮೆಡಿಕಲ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸಿತ್ತು. ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿ ಅವಾಚ್ಯವಾಗಿ ನಿಂದಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಮಂಗಳೂರಿಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿತ್ತು. ವಿಪರ್ಯಾಸ ಅಂದರೆ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ನಡೆಸಿದ್ದ ಆರೋಪಿಗಳಿಗೆ ಠಾಣೆಯಲ್ಲೇ ಜಾಮೀನು ಆಗಿತ್ತು. ಬಳಿಕ ಸ್ವತಃ ಸಿಎಂ ಬೊಮ್ಮಾಯಿ ಅವರೇ ಪರೋಕ್ಷವಾಗಿ ‘ಆಕ್ಷನ್‌ಗೆ ರಿಯಾಕ್ಷನ್’ ಎನ್ನುವ ಮೂಲಕ ಕೋಮುದಾಳಿಯನ್ನು ಸಮರ್ಥಿಸಿ ಅಚ್ಚರಿ ಮೂಡಿಸಿದ್ದರು. ಇದರ ಪರಿಣಾಮ ಎಂಬಂತೆ ಇದೀಗ ಕಿಡಿಗೇಡಿಗಳ ತಂಡ ಮತ್ತೆ ತನ್ನ ಹಳೇ ಚಾಳಿಯನ್ನು ಮುಂದುವರಿಸಿದ್ದಾರೆ.