LATEST NEWS
ಮಂಗಳೂರು – ಆಭರಣದ ಅಂಗಡಿಯಲ್ಲಿ ನೈತಿಕ ಪೊಲೀಸ್ ಗಿರಿ ನಾಲ್ವರು ಅರೆಸ್ಟ್
ಮಂಗಳೂರು ಡಿಸೆಂಬರ್ 12: ಆಭರಣದ ಅಂಗಡಿಯೊಂದರಲ್ಲಿ ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದ್ದ ನಾಲ್ವರು ಆರೋಪಿಗಳನ್ನು ಕದ್ರಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಂಕನಾಡಿಯ ಚೇತನ್ ಕುಮಾರ್ (39), ಪ್ರಕಾಶ್ (34), ಜೆಪ್ಪಿನಮೊಗರುವಿನ ಶಿಬಿನ್ ಪಡಿಕಲ್ (36) ಹಾಗೂ ಅತ್ತಾವರದ ಗಣೇಶ್ (35) ಎಂದು ಗುರುತಿಸಲಾಗಿದೆ. ಕಂಕನಾಡಿಯ ಸುಲ್ತಾನ್ ಗೋಲ್ಡ್ ಚಿನ್ನಾಭರಣ ಮಾರಾಟ ಮಳಿಗೆಯ ಉದ್ಯೋಗಿಯಾಗಿರುವ ಮುಸ್ಲಿಂ ಯುವಕ, ತನ್ನ ಸಹೋದ್ಯೋಗಿ ಹಿಂದೂ ಯುವತಿಯ ಜೊತೆ ಸಲುಗೆಯಿಂದ ಇದ್ದಾನೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಮಂಗಳವಾರ (ಡಿ 6ರಂದು) ಮಳಿಗೆಗೆ ನುಗ್ಗಿ ಆತನ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆ ಬಗ್ಗೆ ಕದ್ರಿ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಸುಲ್ತಾನ್ ಗೋಲ್ಡ್ ಮಳಿಗೆಗೆ ಗುಂಪೊಂದು ಅಕ್ರಮವಾಗಿ ಪ್ರವೇಶಿಸಿ ದಾಂದಲೆ ನಡೆಸಿದ ಬಗ್ಗೆ ಮಳಿಗೆಯ ಮಾಲೀಕರು ದೂರು ನೀಡಿದ್ದರು. ಯುವಕರ ಗುಂಪು ಹಲ್ಲೆ ನಡೆಸಿದ ಬಗ್ಗೆ ಹಲ್ಲೆಗೊಳಗಾದ ಯುವಕ ಕೂಡ ದೂರು ನೀಡಿದ್ದ. ‘ಮುಸ್ಲಿಂ ಯುವಕ ತನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಲ್ಲದೇ, ಬೆದರಿಕೆಯನ್ನೂ ಒಡ್ಡಿದ್ದಾನೆ’ ಎಂದು ಆರೋಪಿಸಿ ಆ ಮಳಿಗೆಯಲ್ಲಿ ಸಿಬ್ಬಂದಿಯಾಗಿರುವ ಹಿಂದೂ ಯುವತಿಯ ತಾಯಿ ಕೂಡಾ ದೂರು ನೀಡಿದ್ದರು. ‘ಹಲ್ಲೆಗೊಳಗಾದ ಯುವಕ ಹಾಗೂ ಮಳಿಗೆಯ ಮಾಲೀಕರು ನೀಡಿದ ದೂರಿನ ಆಧಾರದಲ್ಲಿ ಸಾಕ್ಷ್ಯಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.