LATEST NEWS
ಮಳೆಗಾಲದಲ್ಲಿ ಉಂಟಾಗುವ ಪ್ರಾಕೃತಿಕ ವಿಕೋಪಗಳಿಗೆ ತಕ್ಷಣವೇ ಸ್ಪಂದಿಸಲು ಸನ್ನದ್ಧರಾಗಿರಿ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ

ಉಡುಪಿ, ಮೇ 13 : ಜಿಲ್ಲೆಯಲ್ಲಿ ಮುಂಬರುವ ಮಳೆಗಾಲದಲ್ಲಿ ಹೆಚ್ಚು ಮಳೆಯಿಂದಾಗಿ ಉಂಟಾಗುವ ಪ್ರಕೃತಿ ವಿಕೋಪ ವಿಪತ್ತುಗಳ ಪರಿಹಾರ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳಲು ಅಗತ್ಯವಿರುವ ಎಲ್ಲಾ ರೀತಿಯ ತಯಾರಿಯೊಂದಿಗೆ ಮುಂಚಿತವಾಗಿಯೇ ಯೋಜನೆಗಳನ್ನು ರೂಪಿಸಿಕೊಂಡು, ಕೂಡಲೇ ಸ್ಪಂದಿಸಲು ಸನ್ನದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಸೂಚನೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮುಂಗಾರು ಮಳೆಗಾಲದಲ್ಲಿ ಮಳೆಯ ನೀರು ಹೆಚ್ಚಾಗಿ ಕೃತಕ ನೆರೆಗಳು ಉಂಟಾಗಿ ಮನೆಗಳಿಗೆ ಹಾಗೂ ಕೃಷಿ ಜಮೀನುಗಳಿಗೆ ನೀರು ನುಗ್ಗಿ ಹಾನಿ ಉಂಟಾಗುತ್ತದೆ. ಕಳೆದ ಮಳೆಗಾಲದಲ್ಲಿ ಇಂತಹ ಪ್ರಕರಣಗಳು ಉಂಟಾಗಿ ಸಾರ್ವಜನಿಕರು ತೊಂದರೆಯನ್ನು ಅನುಭವಿಸಿದ್ದಾರೆ. ಈ ಬಾರಿ ಹೀಗಾಗದಂತೆ ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ರಾಜ ಕಾಲುವೆ, ತೋಡುಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸಲು ಈಗಾಗಲೇ ಕಳೆದ ಎರಡು ಮೂರು ತಿಂಗಳಿನ ಹಿಂದೆ ಸೂಚಿಸಲಾಗಿದೆ. ಆದರೂ ಸಹ ಇವುಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಕೂಡಲೇ ತಹಶೀಲ್ದಾರರುಗಳು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ನದಿಯಲ್ಲಿ ಹೂಳು ತುಂಬಿದ ಕಾರಣ ಕೆಲವು ಭಾಗಗಳಲ್ಲಿ ನೀರು ಕೃಷಿ ಭೂಮಿಗೆ ನುಗ್ಗಿ ಬೆಳೆ ಹಾನಿ ಉಂಟು ಮಾಡುತ್ತಿದೆ. ಈ ಬಗ್ಗೆ ರೈತರು ಇದರ ತೆರವಿಗೆ ಮನವಿ ಮಾಡಿದ್ದಾರೆ. ತೆರವು ಕಾರ್ಯವನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ ರಸ್ತೆಯ ಎರಡೂ ಬದಿಗಳಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಯಾವ ಯಾವ ಪ್ರದೇಶಗಳಲ್ಲಿ ಕೈಗೊಳ್ಳಬೇಕಾಗಿರುವ ಕಾಮಗಾರಿಗಳ ಬಗ್ಗೆ ತಿಳಿಸಿದರೂ ಸಹ ಹೆದ್ದಾರಿ ಇಲಾಖೆಗಳ ಅಭಿಯಂತರರುಗಳು ಸ್ಪಂದಿಸದೇ ಇರುವುದು ಕಂಡುಬರುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಅಂತಹವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಎಫ್.ಐ.ಆರ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಳೆ ನೀರು ಕೊಯ್ಲು ಅನ್ನು ಸರ್ಕಾರಿ ಹಾಗೂ ಖಾಸಗಿ ಬೋರ್‌ವೆಲ್ ಹಾಗೂ ತೆರೆದ ಬಾವಿಗಳಿಗೆ ಅಳವಡಿಸುವಂತೆ ಕಳೆದ ಸಾಲಿನಲ್ಲಿ ಸೂಚನೆ ನೀಡಲಾಗಿತ್ತು. ಜಿಲ್ಲೆಯಲ್ಲಿ ಗ್ರಾಮೀಣ ಭಾಗದ 1616 ತೆರೆದ ಬಾವಿಗಳು ಹಾಗೂ 1554 ಕೊಳವೆ ಬಾವಿಗಳು ಇವೆ. ಆದರೆ ಕ್ರಮವಾಗಿ 44 ಹಾಗೂ 93 ಗಳಿಗೆ ಮಾತ್ರ ಮಳೆ ನೀರು ಕೊಯ್ಲು ಅಳವಡಿಸಲಾಗಿದೆ. ಇವುಗಳನ್ನು ಆದ್ಯತೆಯ ಮೇಲೆ ಕೂಡಲೇ ಅಳವಡಿಸಬೇಕೆಂದು ಸೂಚನೆ ನೀಡಿದ ಅವರು, ಖಾಸಗಿ ಯವರೂ ಸಹ ಮಳೆ ನೀರು ಕೊಯ್ಲನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಅಂತರ್ಜಲ ಹೆಚ್ಚುವುದರ ಜೊತೆಗೆ ಬೇಸಿಗೆಯಲ್ಲಿ ನೀರಿನ ಅಭಾವ ತಪ್ಪಿಸಲು ಸಾಧ್ಯ ಎಂದರು.
ಜಿಲ್ಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಂಡುಬAದಿಲ್ಲ. ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಸ್ಪಂದಿಸುವ ಕಾರ್ಯಗಳು ಆಗಬೇಕು ಎಂದ ಅವರು, ನೀರಿನ ಗುಣಮಟ್ಟ ಪರೀಕ್ಷೆಗಳನ್ನು ಆಗಿಂದಾಗ್ಗೆ ಕೈಗೊಳ್ಳಬೇಕು ಸೂಚನೆ ನೀಡಿದರು.
ಅಪಾಯಕಾರಿಯಾದಂತಹ ಹಳೆಯ ಮರಗಳು, ಬೇರು ಸಡಿಲಗೊಂಡ ಮರಗಳನ್ನು ತೆರವು ಕಾರ್ಯಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು. ಕಳೆದ ಸಾಲಿನಲ್ಲಿ ಮರಗಳ ಉರುಳುವಿಕೆಯಿಂದ ಎರಡು ಮಾನವ ಹಾನಿ ಪ್ರಕರಣಗಳು ಉಂಟಾಗಿವೆ. ಈ ಬಾರಿ ಹಾಗಾಗದಂತೆ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ತೆರವು ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.
ಮಳೆಯಿಂದ ಉಂಟಾದ ಕಟ್ಟಡದ ಹಾನಿ, ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದ ಅವರು, ಶಾಲಾ ಕಾಲೇಜುಗಳ ಕಟ್ಟಡಗಳನ್ನು ಪರೀಕ್ಷಿಸಿ, ಅವುಗಳು ಸರಿಯಿವೆ ಎಂಬ ದೃಢೀಕರಣಗಳನ್ನು ಅಭಿಯಂತರರಿAದ ಪಡೆಯಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸನ್ನದ್ಧರಾಗಿರಬೇಕು. ಈ ಸಮಿತಿಗಳಲ್ಲಿ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಹಾಗೂ ಮಹಿಳೆಯರನ್ನೂ ಸಹ ಸಮಿತಿಯ ಸದಸ್ಯರನ್ನಾಗಿಸಬೇಕು.
ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಪತ್ತು ನಿರ್ವಹಣಾ ಕಾರ್ಯವನ್ನು ಮಾಡುವ ಕುರಿತು ಯೋಜನೆಗಳನ್ನು ಸಹ ರೂಪಿಸಬೇಕು. ಯಾವುದೇ ವಿಪತ್ತುಗಳು ಆದಲ್ಲಿ ಗ್ರಾಮ ಲೆಕ್ಕಿಗರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಸ್ಪಂ.ದಿಸಲು ಮುಂದಾಗಬೇಕು. ಮರಣ ಸಂಭವಿಸಿದ್ದಲ್ಲಿ 24 ಗಂಟೆಯ ಒಳಗಾಗಿ ಅವರುಗಳಿಗೆ ಪರಿಹಾರ ಒದಗಿಸಲು ಕಾರ್ಯಪ್ರವೃತ್ತರಾಗಿರಬೇಕು ಎಂದರು.