LATEST NEWS
ಮುಂಗಾರು ಮಳೆಗೆ ಕ್ಷಣಗಣನೆ ಆರಂಭ….!!
ಮುಂಗಾರು ಮಳೆಗೆ ಕ್ಷಣಗಣನೇ ಆರಂಭ….!!
ಮಂಗಳೂರು ಮೇ.29: ಜೂನ್ 5 ರ ನಂತರ ಪ್ರಾರಂಭವಾಗಬೇಕಿದ್ದ ಮುಂಗಾರು ಮಳೆ ಜೂನ್ 1 ರಂದೇ ಕೇರಳಕ್ಕೆ ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನಲೆ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯಾಗುವ ಸಾಧ್ಯತೆ ದಟ್ಟವಾಗಿದ್ದು, ಮುಂಗಾರು ಮಳೆ ಆಗಮನಕ್ಕೆ ಕ್ಷಣಗಣನೇ ಆರಂಭವಾಗಿದೆ.
ಮೇಲ್ಮೈ ಸುಳಿಗಾಳಿ ಪ್ರಭಾವದಿಂದಾಗಿ ಜೂನ್ 1ರಂದು ಕೇರಳಕ್ಕೆ ನೈರುತ್ಯ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಈ ಹಿಂದೆ ಜೂನ್ 5ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೇ 15ರಂದು ತಿಳಿಸಿತ್ತು. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪ್ರಭಾವದಿಂದಾಗಿ ಮುಂಗಾರು ಮಾರುತಗಳು ಚುರುಕಾಗಿವೆ ಎಂದು ಐಎಂಡಿ ತಿಳಿಸಿದೆ.
ಅರಬ್ಬಿ ಸಮುದ್ರದಲ್ಲಿ ಮೇ 31ರಿಂದ ಜೂನ್ 4ರವರೆಗೆ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಲಿದ್ದು, ಇದು ನೈರುತ್ಯ ಮುಂಗಾರು ಮಾರುತಗಳ ಪ್ರವೇಶಕ್ಕೆ ಅನುಕೂಲಕರ ವಾತಾವರಣ ಕಲ್ಪಿಸಲಿದೆ. ಈ ವರ್ಷ ಮುಂಗಾರಿನಲ್ಲಿ ವಾಡಿಕೆ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಇನ್ನು ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಕರಾವಳಿ ಮೀನುಗಾರರಿಗೆ ಹವಾಮಾನ ಇಲಾಖೆಯಿಂದ ಎಚ್ಚರಿಕೆ ರವಾನಿಸಿದ್ದು, ಭಾರಿ ಗಾಳಿ ಮಳೆಯಾಗುವ ಸಂಭವ ಇರುವುದರಿಂದ ಮೀನುಗಾರರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದೆ. ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಗಾಳಿ ಮಳೆಯಾಗುವ ಸಾಧ್ಯತೆ ಇದ್ದು ಮೀನುಗಾರರು ಮುಂದಿನ ನಾಲ್ಕು ದಿನಗಳ ಕಾಲ ಸಮುದ್ರಕ್ಕಿಳಿಯದೇ ಇರುವುದು ಉತ್ತಮ ಎಂದು ಹವಮಾನ ಇಲಾಖೆ ತಿಳಿಸಿದೆ.