LATEST NEWS
ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ ಕರಾವಳಿಗೆ ಎಂಟ್ರಿ

ಮಂಗಳೂರು ಮೇ 26: ಕರಾವಳಿಯಲ್ಲಿ ಉತ್ತಮವಾದ ಮುಂಗಾರು ಪೂರ್ವ ಮಳೆಯಾಗಿದ್ದು, ಇದೀಗ ಜೂನ್ ಮೊದಲ ವಾರದಲ್ಲೇ ಕರಾವಳಿಗೆ ಮುಂಗಾರು ಪ್ರವೇಶವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 1ರಂದು ಕೇರಳ ಕರಾವಳಿ ಪ್ರವೇಶಿಸಲಿರುವ ನೈಋುತ್ಯ ಮುಂಗಾರು ಜೂನ್ 6 ಅಥವಾ 7ರಂದು ಕರ್ನಾಟಕಕ್ಕೆ ಲಗ್ಗೆ ಇಡಲಿದೆ. ಜೂನ್ 13 ಅಥವಾ 14ರ ವೇಳೆಗೆ ದಕ್ಷಿಣ ಒಳನಾಡಿಗೆ ವ್ಯಾಪಿಸಲಿದ್ದು, ಬೆಂಗಳೂರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆದರೆ, ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ರೆಮಲ್’ ಚಂಡಮಾರುತವು ಮಾನ್ಸೂನ್ ಆಗಮನದ ಮೇಲೆ ಕೊಂಚ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದೂ ಇಲಾಖೆ ಹೇಳಿದೆ. ನೈಋುತ್ಯ ಮುಂಗಾರು ಮಾರುತ ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಪ್ರಗತಿ ಸಾಧಿಸಿದ್ದು, ಕೇರಳದತ್ತ ಸಾಗಿದೆ.

ಮೇ 31ರವರೆಗೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಗಂಟೆಗೆ 40-50 ಕಿಮೀ ವೇಗದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ. ಅಲ್ಲದೇ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆಯನ್ನು ನೀಡಿದೆ.