FILM
ಪುನೀತ್ ಹೆಸರಲ್ಲಿ ಫಿಲ್ಮ್ ಛೇಂಬರ್‌ನಿಂದ ಹಣ ವಸೂಲಿ ಕಾರ್ಯ? ಖಾಸಗಿ ಖಾತೆಗೆ ಹಣ ವರ್ಗಾವಣೆ, ಏನಿದು ಆರೋಪ
ಬೆಂಗಳೂರು, ನವೆಂಬರ್ 08: ನಟ ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿ ಎರಡು ವಾರ ಕಳೆದಿವೆ. ಅಪ್ಪುವಿನ ನುಡಿನಮನಕ್ಕೆ ಫಿಲ್ಮ್ ಛೇಂಬರ್ ಸಕಲ ಸಿದ್ಧತೆ ನಡೆಸುತ್ತಿದೆ. ನವೆಂಬರ್ 16 ರಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಬೆನ್ನಲ್ಲೇ ಫಿಲ್ಮ್ ಛೇಂಬರ್ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿಬಂದಿದೆ.
ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಚಂದಾ ವಸೂಲಿ ಮಾಡಲಾಗುತ್ತಿದ್ದು, ಕೆಲವರು ತಮ್ಮ ಖಾಸಗಿ ಅಕೌಂಟ್‌ಗೂ ಹಣ ವರ್ಗಾಯಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ನಿರ್ಮಾಪಕ ಎಸ್. ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ‘ಫಿಲ್ಮ್ ಛೇಂಬರ್‌ನವರು ಅಪ್ಪುವಿಗೆ ಶ್ರದ್ಧಾಂಜಲಿ ಸಲ್ಲಿಸುವ ಹೆಸರಿನಲ್ಲಿ ಇದಾಗಲೇ 16 ಲಕ್ಷ ರೂಪಾಯಿ ಹಣ ಸಂಗ್ರಹಿಸಿದ್ದಾರೆ. ಒಬ್ಬ ನಟನಿಗೆ ನುಡಿನಮನ ಸಲ್ಲಿಸುವಷ್ಟು ಹಣ ಫಿಲ್ಮ್ ಛೇಂಬರ್‌ನಲ್ಲಿ ಇಲ್ಲವಾ, ಅದು ಅಷ್ಟು ಬಡವಾಗಿದೆಯಾ? ನುಡಿನಮನದ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿರುವುದು ತುಂಬಾ ಬೇಸರದ ವಿಷಯ. ಕಲಾವಿದರ ಸಂಘದವರೊಂದಿಗೆ ಫಿಲಂ ಛೇಂಬರ್‌ನವರು ಈ ಬಗ್ಗೆ ಮಾತನಾಡಿದ್ದಾರಾ? ಗೊತ್ತಾಗಬೇಕಿದೆ’ ಎಂದರು.
ಈ ಮಧ್ಯೆ ಕೆಲವರು ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿರುವುದು ತಿಳಿದುಬಂದಿದ್ದು. ಫಿಲ್ಮ್ ಛೇಂಬರ್ ಅಕೌಂಟ್ ಇರುವಾಗ ವೈಯಕ್ತಿಕ ಖಾತೆಗಳಿಗೆ ಹಣ ಹಾಕಿಸಿಕೊಳ್ಳುತ್ತಿರುವ ಹಿಂದಿನ ಉದ್ದೇಶವೇನು? ಎಂದು ಪ್ರಶ್ನಿಸಿದ್ದಾರೆ. ಫಿಲ್ಮ್ ಛೇಂಬರ್‌ನವರು ಹಣ ವಸೂಲಿ ಮಾಡುತ್ತಿರುವ ಬಗ್ಗೆ ನಿರ್ಮಾಪಕ ಜೆ.ಜೆ.ಶ್ರೀನಿವಾಸ ಅವರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾದ ಆಡಿಯೋ ಕೂಡ ವೈರಲ್ ಆಗುತ್ತಿದೆ. ಈ ರೀತಿ ಚಂದಾ ಎತ್ತುವ ಮೂಲಕ ಅಗಲಿದ ನಟನನ್ನು ಅವಮಾನಿಸಲಾಗುತ್ತಿದೆ ಎಂದು ಅದರಲ್ಲಿ ಹೇಳಲಾಗಿದೆ.
ಆದರೆ ಈ ಆರೋಪಗಳನ್ನು ಫಿಲ್ಮ್ ಛೇಂಬರ್ ಅಧ್ಯಕ್ಷ ಜೈರಾಜ್ ತಳ್ಳಿಹಾಕಿದ್ದು, ಇವೆಲ್ಲಾ ಸುಳ್ಳು ವದಂತಿ. ಯಾರ ಬಳಿಯೂ ಚಂದಾ ಎತ್ತುತ್ತಿಲ್ಲ, ಛೇಂಬರ್‌ನಲ್ಲಿ ಹಣವಿದ್ದು, ಅದರಿಂದಲೇ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದಿದ್ದಾರೆ. ಒಟ್ಟಿನಲ್ಲಿ ಸತ್ಯಾಂಶ ಏನು ಎಂಬುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.