DAKSHINA KANNADA
ಎ.ಟಿ.ಎಂ ಸರಿಪಡಿಸುತ್ತೇವೆ ಎಂದು ನಂಬಿಸಿ ಮೋಸ, 68 ಸಾವಿರ ಗೋತಾ
ಎ.ಟಿ.ಎಂ ಸರಿಪಡಿಸುತ್ತೇವೆ ಎಂದು ನಂಬಿಸಿ ಮೋಸ, 68 ಸಾವಿರ ಗೋತಾ
ಪುತ್ತೂರು, ಮೇ 5: ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ, ಸರಿಪಡಿಸಿ ಕೊಡುತ್ತೇವೆಂದು ನಂಬಿಸಿ ಯುವಕನೊಬ್ಬನ ಬ್ಯಾಂಕ್ ಅಕೌಂಟ್ ನಿಂದ 68 ಸಾವಿರ ರೂಪಾಯಿ ಎಗರಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರಿನ ಕಾರ್ತಿಕ್ ಶೆಟ್ಟಿ ಎನ್ನುವ ಯುವಕನಿಗೆ ಕೆನರಾ ಬ್ಯಾಂಕ್ ನಿಂದ ಕಾಲ್ ಮಾಡುತ್ತಿರುವುದಾಗಿ ಹೇಳಿದ ಅನಾಮಿಕ ವ್ಯಕ್ತಿ ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಕೂಡಲೇ ಸರಿಪಡಿಸಬೇಕಿದೆ.
ಅದಕ್ಕಾಗಿ ನಿಮ್ಮ ಎಟಿಎಂ ಕಾರ್ಡ್ ಸಂಖ್ಯೆ ಹಾಗೂ ಇತರ ವಿವರಗಳನ್ನು ನೀಡಿ ಎಂದು ಕಾಲ್ ಮಾಡಿದ ಅನಾಮಿಕ ವ್ಯಕ್ತಿ ಹೇಳಿದ್ದಾರೆ.
ಯುವಕ ತನ್ನ ಎಟಿಎಂ ಕಾರ್ಡ್ ಬಳಸದೆ 6 ತಿಂಗಳಾದ ಹಿನ್ನಲೆಯಲ್ಲಿ ಬ್ಲಾಕ್ ಆಗಿರಲೂ ಬಹುದು ಎಂದು ತಿಳಿದು ಎಲ್ಲಾ ವಿವರಗಳನ್ನು ಅನಾಮಿಕ ವ್ಯಕ್ತಿಗೆ ನೀಡಿದ್ದಾರೆ.
ನೀಡಿದ ತಕ್ಷಣ ಬ್ಯಾಂಕಿನ ಅಕೌಂಟ್ ನಿಂದ 10 ಸಾವಿರ ರೂಪಾಯಿ ಕಡಿತಗೊಂಡಿದೆ. ಇದನ್ನು ಪ್ರಶ್ನಿಸಿ ಹಣ ಕಳೆದುಕೊಂಡ ಯುವಕ ಮತ್ತೆ ತನಗೆ ಕರೆ ಬಂದ ಮೊಬೈಲ್ ಸಂಖ್ಯೆಗೆ ಕಾಲ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಯುವಕನನ್ನು ಮತ್ತೆ ಮರಳು ಮಾಡಿದ ಅನಾಮಿಕ , ಸ್ವಲ್ಪ ತೊಂದರೆಯಾಗಿ ಹಣ ಡೆಬಿಟ್ ಆಗಿದೆ.
ನಿಮ್ಮ ಮೊಬೈಲ್ ಗೆ ಬ್ಯಾಂಕಿನ ಓ.ಟಿ.ಪಿ ಬರುತ್ತೆ, ಅದನ್ನು ಹೇಳಿ ಎಂದಿದ್ದಾನೆ.
ಕೂಡಲೇ ಯುವಕ ಮತ್ತೆ ಆ ವ್ಯಕ್ತಿಗೆ ತನ್ನ ಮೊಬೈಲ್ ಸಂಖ್ಯೆಗೆ ಬಂದ ಓ.ಟಿ.ಪಿ ಯನ್ನು ನೀಡಿದ್ದಾನೆ.
ಅದನ್ನು ಪಡೆದ ವ್ಯಕ್ತಿ ಯುವಕನ ಅಕೌಂಟ್ ನಿಂದ ಮತ್ತೆ 58.500 ರೂಪಾಯಿಗಳನ್ನು ಲಪಟಾಯಿಸಿದ್ದಾನೆ.
ತನಗಾದ ಮೋಸದ ಬಗ್ಗೆ ಲೇಟಾಗಿ ತಿಳಿದ ಯುವಕ ಇದೀಗ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಕರೆ ಮಾಡಿದ ವ್ಯಕ್ತಿಯ ಮೊಬೈಲ್ ನಂಬರ್ ಆಧಾರಿಸಿ ಆತನ ವಿರುದ್ಧ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಬ್ಯಾಂಕ್ ನಿಂದ ಕರೆ ಮಾಡುತ್ತೇನೆಂದು ನಂಬಿಸಿ ಮೋಸ ಹೋದ ಸಾವಿರಾರು ಘಟನೆಗಳು ಬೆಳಕಿಗೆ ಬಂದರೂ , ಇನ್ನೂ ಇಂಥಹ ಮೋಸಕ್ಕೆ ಯುವಕರೇ ಬಲಿಯಾಗುತ್ತಿರುವುದು ದುರಂತವೇ ಸರಿ.
ಸರಕಾರ ಇಂಥ ಮೋಸ ಮಾಡುವ ಜಾಲವನ್ನು ಪತ್ತೆ ಹಚ್ಚುವ ಕಾರ್ಯ ಮಾಡಬೇಕು ಎನ್ನುವ ಒತ್ತಾಯವೂ ಇದೀಗ ಮೋಸ ಹೋದವರಿಂದ ಕೇಳಿ ಬರುತ್ತಿದೆ.