ಚೀನಾ,ಏಪ್ರಿಲ್ 19: ಪತಿಯೊಂದಿಗೆ ನಡೆದ ಕ್ಷುಲ್ಲಕ ಜಗಳವೊಂದು ಬೀದಿಯಲ್ಲಿ ‘ಹಣದ ಮಳೆ’ ಸುರಿಸಿದ ವಿಲಕ್ಷಣ ಘಟನೆ ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಶಾಂಟೌ ನಗರದಲ್ಲಿ ನಡೆದಿದೆ. ಮನೆಯಲ್ಲಿಟ್ಟಿದ್ದ ಸುಮಾರು 1.5 ಕೋಟಿ ರೂಪಾಯಿ (20 ಲಕ್ಷ ಹಾಂಕಾಂಗ್ ಡಾಲರ್) ಮೊತ್ತದ ನಗದನ್ನು ಆಕ್ರೋಶಗೊಂಡ ಪತ್ನಿಯೊಬ್ಬಳು ಬಾಲ್ಕನಿಯಿಂದ ಕೆಳಕ್ಕೆ ಎಸೆದಿದ್ದಾರೆ.

ನಗರದ ಐಷಾರಾಮಿ ‘ಸ್ಟಾರ್ ಲೇಕ್ ಸಿಟಿ’ ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ದಂಪತಿಗಳ ನಡುವೆ ನಡೆದ ಗದ್ದಲ ವಿಕೋಪಕ್ಕೆ ಹೋಗಿದೆ. ಈ ವೇಳೆ ಸಿಟ್ಟಿನ ಭರದಲ್ಲಿ ಮಹಿಳೆ ಮನೆಯಲ್ಲಿದ್ದ ಹಾಂಕಾಂಗ್ ಕರೆನ್ಸಿಯ 1,000 ಮುಖಬೆಲೆಯ ನೋಟುಗಳ ಕಂತೆಗಳನ್ನು ಕಿಟಕಿಯ ಹೊರಕ್ಕೆ ಎಸೆದಿದ್ದಾರೆ. ಆಕಾಶದಿಂದ ನೋಟುಗಳು ಉದುರುತ್ತಿರುವುದನ್ನು ಕಂಡ ದಾರಿಹೋಕರು ಮತ್ತು ವಾಹನ ಸವಾರರು ಹಣ ಆಯ್ದುಕೊಳ್ಳಲು ಮುಗಿಬಿದ್ದಿದ್ದಾರೆ. ಇದರಿಂದಾಗಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಚೀನಾದಲ್ಲಿನ ಅತ್ಯಾಧುನಿಕ CCTV ಕಣ್ಗಾವಲು ವ್ಯವಸ್ಥೆಯಿಂದಾಗಿ ಹಣ ಆಯ್ದುಕೊಂಡವರನ್ನು ಸುಲಭವಾಗಿ ಗುರುತಿಸಲಾಗಿದೆ. “ಬೇರೆಯವರ ಸೊತ್ತನ್ನು ಅನಧಿಕೃತವಾಗಿ ಇಟ್ಟುಕೊಳ್ಳುವುದು ಕಾನೂನುಬಾಹಿರ” ಎಂದು ಪೊಲೀಸರು ಎಚ್ಚರಿಸಿದ ಬೆನ್ನಲ್ಲೇ, ಈಗಾಗಲೇ ಶೇ. 80ಕ್ಕೂ ಅಧಿಕ ಹಣ ದಂಪತಿಗೆ ಮರಳಿದೆ ಎಂದು ವರದಿಯಾಗಿದೆ. ಮಹಿಳೆಯು ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿದ್ದು, ಸದ್ಯ ದಂಪತಿಗಳು ಸಾರ್ವಜನಿಕ ಶಾಂತಿಗೆ ಭಂಗ ತಂದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ.