Connect with us

DAKSHINA KANNADA

ಉದನೆಯಲ್ಲೊಂದು ಹಣ ದ್ವಿಗುಣಗೊಳಿಸುವ ಕಂಪನಿ, ಬಡಿಯುತ್ತಿದೆ ಮೋಸದ ವಾಸನೆ

ಪುತ್ತೂರು ಅಗಸ್ಟ್ 19: ಪುತ್ತೂರಿನಲ್ಲಿ ಇದೀಗ ಹಣ ಡಬ್ಬಲ್ ದಂಧೆ ಪ್ರಾರಂಭವಾಗಿದೆ. ಈಗಾಗಲೇ ದೇಶದಲ್ಲಿ ಇದೇ ರೀತಿ ಹಣ ದ್ವಿಗುಣ ಮಾಡುವ ಕಂಪೆನಿಗಳಿಂದ ಸಾವಿರಾರು ಜನರು ಮೊಸ ಹೋಗಿರುವ ಬೆನ್ನಲ್ಲೆ ಇದೀಗ ಮತ್ತೊಂದು ಕಂಪೆನಿ ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿದೆ.


ನಿಮ್ಮ ಹಣಕ್ಕೆ ದೇಶದ ಯಾವುದೇ ಬ್ಯಾಂಕ್ ನಲ್ಲೂ ನೀಡದ ಬಡ್ಡಿ ನಿಮಗೆ ಬೇಕಾದಲ್ಲಿ ನೀವು ಖಂಡಿತವಾಗಿ ದಕ್ಷಿಣಕನ್ನಡ ಜಿಲ್ಲೆಯ ಕುಗ್ರಾಮದಲ್ಲಿರುವ ಈ ಆಫೀಸ್ ಗೆ ಬರಬೇಕಾಗುತ್ತದೆ. ಹೌದು ನೀವು ಇಲ್ಲಿ 1 ಲಕ್ಷ ನೀಡಿದಲ್ಲಿ ಕೇವಲ 28 ದಿನಗಳಲ್ಲಿ ನಿಮ್ಮ ಹಣ ದ್ವಿಗುಣಗೊಳ್ಳುತ್ತದೆ. ಹೆಸರಿಗೆ ಬಿಲ್ಡಿಂಗ್ ಕ್ರಾಂಟ್ರಾಕ್ಟ್ ಕಂಪನಿ ಎಂದು ಹೇಳಿಕೊಳ್ಳುತ್ತಿರುವ ಇಲ್ಲಿ ನಡೆಯುತ್ತಿರುವ ಈ ವ್ಯವಹಾರಕ್ಕೆ ಇದೀಗ ಜನ ಆಕರ್ಷಿತಗೊಂಡಿದೆ.

 


ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉದನೆ ಎನ್ನುವ ಕುಗ್ರಾಮವೊಂದರಲ್ಲಿ ಆರಂಭಗೊಂಡಿರುವ ಎಲಿಯಾ ಕನ್ ಸ್ಟ್ರಕ್ಷನ್ ಮತ್ತು ಬಿಲ್ಡರ್ಸ್ ಎನ್ನುವ ಹೆಸರಿನಲ್ಲಿ ಈ ಕಂಪನಿಯು ಸ್ಥಳೀಯ ಶಿರಾಡಿ ಗ್ರಾಮಪಂಚಾಯತ್ ನಲ್ಲಿ ಟ್ರೇಡ್ ಲೈಸೆನ್ಸ್ ಪಡೆದುಕೊಂಡಿದೆ. ಆದರೆ ಈ ಕಂಪನಿಯು ಕನ್ ಸ್ಟ್ರಕ್ಷನ್ ಕಂಪನಿಯು ಕಟ್ಟಡ ಕಾಮಗಾರಿಯನ್ನು ನಡೆಸೋದು ಬಿಟ್ಟು ಜನರಿಗೆ ಈ ಕಂಪನಿ ಬಡ್ಡಿ ವ್ಯವಹಾರದಲ್ಲಿ ತೊಡಗಿಕೊಂಡಿದೆ ಎನ್ನುವ ಆರೋಪವಿದೆ. ಕಂಪನಿಯು ತನ್ನ ಪ್ರತಿನಿಧಿಗಳನ್ನು ಗ್ರಾಮದ ತುಂಬಾ ಫೀಲ್ಡ್ ವರ್ಕ್ ಗೆ ಬಿಟ್ಟಿದ್ದು, ಗ್ರಾಮಸ್ಥರಿಗೆ ಹಣ ದ್ವಿಗುಣ ಮಾಡಿಕೊಡುವ ಅಮಿಷ ನೀಡುತ್ತಿದೆ. ಸ್ಥಳೀಯ ಗ್ರಾಮಸ್ಥರ ಪ್ರಕಾರ ಈ ಕಛೇರಿಯು ಕಳೆದ ನಾಲ್ಕು ತಿಂಗಳಿನಿಂದ ಉದನೆಯಲ್ಲಿ ಕಾರ್ಯಾಚರಿಸುತ್ತಿದ್ದು, ಒಂದು ಲಕ್ಷ ನೀಡಿದಲ್ಲಿ, 28 ದಿನಗಳ ಬಳಿಕ ಎರಡು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳುತ್ತಿದೆ. ಈಗಾಗಲೇ ಕೋಟಿಗೂ ಮಿಕ್ಕಿದ ಜನರ ಹಣವನ್ನು ಈ ಕಂಪನಿಯ ಪಡೆದುಕೊಂಡಿದ್ದು, ಕೆಲವರಿಗೆ ಹಣವನ್ನು ದ್ವಿಗುಣ ಮಾಡಿ ನೀಡಿದೆ. ಇದರಿಂದಾಗಿ ಗ್ರಾಮದ ಮಹಿಳೆಯರು ಶ್ರೀ ಶಕ್ತಿ ಹಾಗೂ ಸ್ವಸಹಾಯ ಗುಂಪುಗಳಿಂದ ಬಡ್ಡಿಗೆ ಹಣ ಪಡೆದು ಹಣ ದ್ವಿಗುಣಗೊಳ್ಳುವ ಆಸೆಯಿಂದ ಕಂಪನಿಯಲ್ಲಿ ಹಣ ತೊಡಗಿಸಿಕೊಳ್ಳುತ್ತಿದ್ದಾರೆ.


ಕಂಪನಿಯ ಸಿಬ್ಬಂದಿಗಳ ಪ್ರಕಾರ ಕಳೆದ ಎಂಟು ತಿಂಗಳಿನಿಂದ ಈ ಕಛೇರಿಯು ಅಸ್ತಿತ್ವದಲ್ಲಿದ್ದು, 200 ಕ್ಕೂ ಮಿಕ್ಕಿದ ಗ್ರಾಹಕರು ಕಂಪನಿಯ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ. ಕಂಪನಿ ಮನಸ್ಸು ಮಾಡಿದ ಹಾಗೆ ಆಫರ್ ಗಳು ಚೇಂಜ್ ಆಗುತ್ತಿರುತ್ತವೆ. ನಾಲ್ಕು ತಿಂಗಳ ಹಿಂದೆ ಗ್ರಾಹಕ 1 ಲಕ್ಷ ಹಾಕಿದಲ್ಲಿ, 28 ದಿನಗಳ ಬಳಿಕ ಗ್ರಾಹಕನಿಗೆ ಕಂಪನಿಯು 2 ಲಕ್ಷವನ್ನು ನೀಡುತ್ತದೆ. ಇದೀಗ 50% ಸ್ಕೀಮ್ ಜಾರಿಯಲ್ಲಿದ್ದು, ಈ ಸ್ಕೀಮ್ ಪ್ರಕಾರ 1 ಲಕ್ಷ ಹಾಕಿದಲ್ಲಿ, ಗ್ರಾಹಕನಿಗೆ 28 ದಿನಗಳ ಬಳಿಕ 1.50 ಲಕ್ಷವನ್ನು ಕಂಪನಿ ನೀಡುತ್ತದೆ. ಈ ಸ್ಕೀಮ್ ಕೂಡಾ ಆಗಸ್ಟ್ 30 ಬಳಿಕ ಮುಕ್ತಾಯಗೊಳ್ಳಲಿದೆ. ಬಳಿಕದ ದಿನಗಳಲ್ಲಿ 30% ಸ್ಕೀಮ್ ಜಾರಿಗೆ ಬರಲಿದೆ. ಆದರೆ ಕಂಪನಿಗೆ ಸಂಬಂಧಪಟ್ಟ, ಸ್ಕೀಮ್ ಗೆ ಸಂಬಂಧಪಟ್ಟ ಯಾವುದೇ ಕರಪತ್ರಗಳಾಗಲೀ, ಕಛೇರಿ ನಡೆಸುತ್ತಿರುವ ವ್ಯವಹಾರದ ಬಗ್ಗೆ ಯಾವುದೇ ದಾಖಲೆ ಪತ್ರಗಳೂ ಇಲ್ಲಿಲ್ಲ. ಕನ್ ಸ್ಟ್ರಕ್ಷನ್ ಕಂಪನಿಗಳ ವೆಬ್ ಸೈಟ್ ಗಳಲ್ಲಿ ಎಲಿಯಾ ಹೆಸರಿನ ಕಂಪನಿಯ ಉಲ್ಲೇಖವಿದ್ದರೂ, ಕೆಲವು ಸೈಟ್ ಗಳಲ್ಲಿ ಕಂಪನಿಯ ಯಾವುದೇ ವ್ಯವಹಾರದ ಬಗ್ಗೆ ಉಲ್ಲೇಖವಿಲ್ಲ.


ಹಣ ದ್ವಿಗುಣಗೊಳ್ಳುವ ಆಸೆಯಿಂದ ಕುಗ್ರಾಮದ ಜನ ಈ ಕಛೇರಿಗೆ ಮುಗಿ ಬೀಳುತ್ತಿದ್ದಾರೆ. ಕಂಪನಿಯ ಸಿಬ್ಬಂದಿಗಳ ಪ್ರಕಾರ ಜನರು ನೀಡುವ ಹಣವನ್ನು ಶೇರು ಮಾರುಕಟ್ಟೆಯಲ್ಲಿ ತೊಡಗಿಸಲಾಗುತ್ತದೆ. ಆದರೆ ಈ ವ್ಯವಹಾರಕ್ಕೂ ಕೆಲವು ನಿಯಮ-ನಿಬಂಧನೆಗಳಿದ್ದು, ಎಲ್ಲವನ್ನೂ ಇಲ್ಲಿ ಗಾಳಿಗೆ ತೂರಲಾಗಿದೆ ಎನ್ನುವ ಆರೋಪ ಸಾರ್ವಜನಿಕರದ್ದಾಗಿದೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *