LATEST NEWS
ಬೇಕಿದ್ದರೆ ಒಂದು ವರ್ಷ ರಾಜಕೀಯ ಬಂದ್ ಮಾಡಿ .. ಶಿಕ್ಷಣವನ್ನಲ್ಲ – ಡಾ. ಮೋಹನ್ ಆಳ್ವ
ಉಡುಪಿ ಎಪ್ರಿಲ್ 5: ಕೊರೊನಾ ಕಾರಣವಿಟ್ಟು ಶಾಲೆಗಳನ್ನು ಬಂದ್ ಮಾಡುತ್ತಿರುವ ರಾಜ್ಯ ಸರಕಾರದ ವಿರುದ್ದ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮೋಹನ್ ಆಳ್ವ ಗರಂ ಆಗಿದ್ದಾರೆ.
ಉಡಪಿಯಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿದ್ದರೂ ಸರ್ಕಾರ ಕೋವಿಡ್ ಕಾರಣದಿಂದ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿಸುತ್ತಿದೆ. ಮತ್ತೊಂದೆಡೆ ಸೋಂಕು ಹೆಚ್ಚು ಮಾರಕವಾಗುವ ಅಪಾಯವಿರುವ ಮದ್ಯ ಮಾರಾಟ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿದೆ ಎಂದು ರಾಜ್ಯ ಸರಕಾರದ ಆದೇಶದ ವಿರುದ್ದ ವಾಗ್ದಾಳಿ ನಡೆಸಿದರು.
ಸಭೆ, ಸಮಾರಂಭಗಳಲ್ಲಿ ಅಂತರ ಕಾಣುತ್ತಿಲ್ಲ. ಎಗ್ಗಿಲ್ಲದೆ ಮೋಜು ಮಸ್ತಿ ನಡೆಯುತ್ತಿದೆ. ರಾಜಕೀಯ ಸಮಾವೇಶಗಳಿಗೆ ಕಡಿವಾಣ ಇಲ್ಲದಂತಾಗಿದೆ. ಆದರೆ, ಸೋಂಕು ಹರಡುವ ಕಾರಣದಿಂದ ವಿದ್ಯಾಸಂಸ್ಥೆಗಳನ್ನು ಮಾತ್ರ ಮುಚ್ಚಲಾಗುತ್ತಿದೆ’ ಎಂದು ಆಳ್ವ ಅಸಮಾಧಾನ ವ್ಯಕ್ತಪಡಿಸಿದರು.
ಒಂದು ವರ್ಷ ವಿದ್ಯಾಕ್ಷೇತ್ರ ಬಂದ್ ಆದರೆ ಹೆಚ್ಚು ನಷ್ಟವಿಲ್ಲ ಎಂದು ಕೆಲವು ರಾಜಕಾರಣಿಗಳು ವಾದಿಸುತ್ತಾರೆ. ವಿದ್ಯಾರ್ಥಿಗಳಿಗೆ ಪ್ರಸ್ತುತ ಬೇಕಿರುವುದು ಶಿಕ್ಷಣವೇ ಹೊರತು ರಾಜಕೀಯವಲ್ಲ. ಬೇಕಿದ್ದರೆ ಒಂದು ವರ್ಷ ರಾಜಕೀಯ ಚಟುವಟಿಕೆಗಳು ಬಂದ್ ಮಾಡಲಿ’ ಎಂದು ಹೇಳಿದರು.