DAKSHINA KANNADA
ಸಿಗದ ಮೊಬೈಲ್ ನೆಟ್ ವರ್ಕ್..ಮಗಳ ಆನ್ ಲೈನ್ ಕ್ಲಾಸ್ ಗೆ ತಂದೆಯ ಕೊಡೆ ಆಸರೆ
ಸುಳ್ಯ ಜೂನ್ 17: ಡಿಜಿಟಲ್ ಇಂಡಿಯಾ ಎಂದು ಬೊಬ್ಬೆ ಹೊಡೆಯುವ ದೇಶದಲ್ಲಿ ಸರಿಯಾದ ಮೊಬೈಲ್ ನೆಟ್ ವರ್ಕ್ ಇಲ್ಲ ಎನ್ನುವುದಕ್ಕೆ ವೈರಲ್ ಆಗಿರುವ ಈ ಪೋಟೋ ವೇ ಸಾಕ್ಷಿಯಾಗಿದ್ದು, ಮಗಳ ಆನ್ ಲೈನ್ ಕ್ಲಾಸ್ ಗೆ ಮಳೆಯಲ್ಲಿ ತಂದೆ ಕೊಡೆ ಹಿಡಿದು ನಿಂತಿರುವ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ, ಬಳ್ಳಕ್ಕ ಪ್ರದೇಶದ ವಿದ್ಯಾರ್ಥಿನಿಯೊಬ್ಬರು ಮಳೆಯ ನಡುವೆಯೇ ರಸ್ತೆ ಬದಿಗೆ ತಂದೆಯ ಜೊತೆಗೆ ಬಂದು ಕೊಡೆ ಹಿಡಿದು ಆನ್ ಲೈನ್ ಕ್ಲಾಸ್ ಕೇಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಕ್ಷಿಣಕನ್ನಡ ಜಿಲ್ಲಯ ಸುಳ್ಯ ಹಾಗೂ ಕಡಬ ತಾಲೂಕಿನ ಹಲವಾರು ಗ್ರಾಮೀಣ ಭಾಗಗಳ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ನಿವಾರಣೆಗೆ ಈಗಾಗಲೇ ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಹಲವು ಸಭೆಗಳು ನಡೆದಿದೆ. ಆದರೆ ಅಚ್ಚರಿ ಎಂದರೆ ಸಭೆ ನಡೆದ ಮರುದಿನವೇ ನೆಟ್ವರ್ಕ್ಗಳ ಸ್ಥಿತಿ ಮಾತ್ರ ಅದೇ ರಾಗ ಅದೇ ಹಾಡು ಎಂಬಂತಾಗಿದೆ.
ತಮಗೆ ನೆಟ್‌ವರ್ಕ್ ಇಲ್ಲ, ಸಿಗ್ನಲ್ ಇಲ್ಲ ಎಂದು ಮನೆಯಲ್ಲೇ ಕೂತರೆ ತಮ್ಮ ಭವಿಷ್ಯವೇ ಹಾಳಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳ ಪೋಷಕರು.ಈಗಾಗಲೇ ಕೊರೊನಾ ರೋಗವು ಮಕ್ಕಳ ಭವಿಷ್ಯವನ್ನೇ ಬಹುತೇಕ ಹಾಳು ಮಾಡಿದೆ. ಈ ವಿದ್ಯಾರ್ಥಿನಿಯು ತಂದೆಯ ಜೊತೆಗೆ ರಸ್ತೆಗೆ ಬಂದು ಮಳೆಯ ನಡುವೆಯೇ ಪಾಠ ಕೇಳುತ್ತಿದ್ದಾಳೆ ಹಾಗೂ ತನಗೆ ಓದಲು ಬೇಕಾದ ಪಠ್ಯವನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಾಳೆ.ಇದು ಇವಳ ಮಾತ್ರ ಸಮಸ್ಯೆ ಅಲ್ಲ ಇದೇ ಪ್ರದೇಶದ ಸುಮಾರು 20ಕ್ಕೂ ಹೆಚ್ಚಿನ ಮಕ್ಕಳು ಹೀಗೇ ಪಾಠ ಕೇಳಲು ಗುಡ್ಡದ ತುದಿಗೆ ಹಾಗೂ ರಸ್ತೆಯ ಬದಿಗೆ ಬರುತ್ತಾರೆ ಎನ್ನಲಾಗಿದೆ.