LATEST NEWS
ಸಣ್ಣ ಜಗಳಕ್ಕೆ ಅಮಾಯಕನ ಗುಂಪು ಹಲ್ಲೆ ಮಾಡಿ ಕೊಲೆ – 15 ಮಂದಿ ಅರೆಸ್ಟ್

ಮಂಗಳೂರು ಎಪ್ರಿಲ್ 29: ಕುಡುಪುವಿನಲ್ಲಿ ಯುವಕನೊಬ್ಬ ನಿಗೂಢವಾಗಿ ಸಾವಿಗೀಡಾದ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಭಾನುವಾರ ಮಂಗಳೂರಿನ ಕುಡುಪು ಬಳಿ ಅನುಮಾನಸ್ಪದವಾಗಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರವಾರ್ ಮಾಹಿತಿ ನೀಡಿದ್ದು, ಕುಡುಪು ದೇವಸ್ಥಾನ ಬಳಿ ಕ್ರಿಕೆಟ್ ಟೂರ್ನಮೆಂಟ್ ಆಗುತಿತ್ತು, ಈ ವೇಳೆ ಮೂವತ್ತೈದರ ಹರೆಯದ ವ್ಯಕ್ತಿ ಒಬ್ಬ ಅಲ್ಲಿ ಹೋಗಿದ್ದು. ಈ ವೇಳೆ ಅಲ್ಲಿ ನಿಂತಿದ್ದ ಸಚಿನ್ ಎಂಬ ವ್ಯಕ್ತಿಯ ಜೊತೆ ಗಲಾಟೆಯಾಗಿತ್ತು, ಈ ವೇಳೆ ಕ್ರಿಕೆಟ್ ನೋಡಲು ಬಂದಿದ್ದ ಕೆಲವರು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಯುವಕನ ದೇಹದ ಸೂಕ್ಷ್ಮ ಜಾಗಕ್ಕೆ ಪೆಟ್ಟು ಬಿದ್ದು ಸಾವಿಗೀಡಾಗಿದ್ದಾನೆ ಎಂದು ಪೊಲೀಸ ಆಯುಕ್ತರು ತಿಳಿಸಿದ್ದಾರೆ.

ಸುಮಾರು 30 ಮಂದಿ ಹಲ್ಲೆ ನಡೆಸಿದ ಸಾದ್ಯತೆ ಇದ್ದು, ಈಗಾಗಲೇ ಸಚಿನ್, ದೇವದಾಸ್, ಮಂಜುನಾಥ್ ಸೇರಿದಂತೆ ಹದಿನೈದು ಜನರನ್ನು ವಶಕ್ಕೆ ಪಡೆದಿದ್ದೇವೆ. ಈ ಘಟನೆ ಪ್ರಮುಖ ಆರೋಪಿ ಸಚಿನ್ ಆಟೋ ಡ್ರೈವರ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಐದು ಮಂದಿಗೂ ಅಧಿಕ ಜನ ಮಾರಣಾಂತಿಕ ಹಲ್ಲೆ ಮಾಡಿರುವ ಸಾಧ್ಯತೆ ಇದ್ದು, ಈ ಘಟನೆಯಲ್ಲಿ ಮಾಜಿ ಕಾರ್ಪೊರೇಟರ್ ನ ಗಂಡ ರವೀಂದ್ರ ನಾಯಕ್ ಎಂಬುವವರು ಇರುವ ಮಾಹಿತಿ ಇದೆ ಎಂದು ತಿಳಿದು ಬಂದಿದ್ದು, ಕೊಲೆಯಾದ ವ್ಯಕ್ತಿ ಯಾರೆಂದು ಇನ್ನೂ ಗೊತ್ತಾಗಿಲ್ಲ. ಉತ್ತರ ಭಾರತ ಅಥವಾ ಕೇರಳ ಮೂಲದ ವ್ಯಕ್ತಿಯಾಗಿರುವ ಶಂಕೆ ಇದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ಕುಡುಪು ಬಳಿ ಯುವಕನನ್ನು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಂತ್ಯಂತ ಖಂಡನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್, ಕ್ರಿಕೆಟ್ ಆಟ ಆಡುವ ವೇಳೆ ಆಟಗಾರರ ಗುಂಪು ಹಾಗೂ ಅನ್ಯ ಕೋಮಿನ ಯುವಕನ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು, ಯುವಕನ ಮೇಲೆ ಹಲ್ಲೆಮಾಡಲಾಗಿದೆ. ಈ ರೀತಿಯ ಘಟನೆಗಳು ಕೋಮು ವೈಷಮ್ಯವನ್ನು ಬೀರುತ್ತವೆ. ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ನಾನು ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.