LATEST NEWS
ವಿದ್ಯಾರ್ಥಿಗಳ ಬೆನ್ನುತಟ್ಟಲು ಪ್ರತಿಭಾ ಪುರಸ್ಕಾರ ಆಯೋಜನೆ – ಡಾ. ಎಂ.ಎನ್. ರಾಜೇಂದ್ರ ಕುಮಾರ್
ಮಂಗಳೂರು ಜುಲೈ 21: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಇದರ ವತಿಯಿಂದ 2023-24ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶನಿವಾರ ಸಂಜೆ ಬ್ಯಾಂಕ್ ನಲ್ಲಿರುವ ಮೊಳಹಳ್ಳಿ ಶಿವರಾವ್ ಸಭಾಂಗಣದಲ್ಲಿ ಜರುಗಿತು. ಪ್ರಾರಂಭದಲ್ಲಿ ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಅವರಿಂದ ಯೋಗ ಪ್ರದರ್ಶನ ನಡೆಯಿತು.
ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, “ನಾವು ಶೈಕ್ಷಣಿಕ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕಾರ್ಯಕ್ರಮವನ್ನು ಕಳೆದ 16 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಇನ್ನುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ತುಂಬುವ ನಿಟ್ಟಿನಲ್ಲಿ ಇದೊಂದು ಮಾದರಿ ಕಾರ್ಯವಾಗಿದೆ. ಎಲ್ಲ ವಿದ್ಯಾರ್ಥಿಗಳಿಗೂ ಹೆಚ್ಚು ಅಂಕ ಗಳಿಸುವ ಮನಸ್ಸು ಇರುತ್ತದೆ ಆದರೆ ಕೆಲವರಿಗೆ ಕಷ್ಟವಾಗುತ್ತದೆ. ಇಂದು ಹಿಂದೆ ಉಳಿದಿರುವ ಮಕ್ಕಳು ಮುಂದಿನ ದಿನಗಳಲ್ಲಿ ಸಾಧನೆ ಮಾಡಲು ಮನಸು ಮಾಡಬೇಕು“ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ ಯುಕೆ ಮೋನು ಮಾತನಾಡಿ, “ಇದೊಂದು ಸುಂದರ ಸಮಾರಂಭ. ಸಾಧಕ ಮಕ್ಕಳನ್ನು ಪುರಸ್ಕರಿಸುವ ಮೂಲಕ ಮುಂದಿನ ಪೀಳಿಗೆಯ ಮಕ್ಕಳನ್ನು ಬೆನ್ನುತಟ್ಟುವ ಕೆಲಸವನ್ನು ಎಸ್ ಸಿಡಿಸಿಸಿ ಬ್ಯಾಂಕ್ ಮಾಡುತ್ತ ಬಂದಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ರಾಜೇಂದ್ರ ಕುಮಾರ್ ಅವರ ಸಹಕಾರ ಶ್ಲಾಘನೀಯ. ಈ ವಯಸ್ಸಿನಲ್ಲಿ ಅವರು ಮಾಡುತ್ತಿರುವ ಕಾರ್ಯ ಇಂದಿನ ಯುವಕರಿಗೆ ಮಾದರಿ. ವಿದ್ಯಾರ್ಥಿಗಳಿಗೆ ಈ ರೀತಿಯ ಪ್ರೋತ್ಸಾಹ ದೊರೆತಲ್ಲಿ ಆವರ ಬಾಳು ಹಸನಾಗುತ್ತದೆ“ ಎಂದರು.
ವೇದಿಕೆಯಲ್ಲಿ ಉದ್ಯಮಿ ಯುಕೆ ಮೋನು, ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ವಿನಯ್ ಕುಮಾರ್ ಸೂರಿಂಜೆ, ರವೀಂದ್ರ ಕಂಬಳಿ ಮತ್ತಿತರರು ಉಪಸ್ಥಿತರಿದ್ದರು. ಸಿಇಓ ಗೋಪಿನಾಥ್ ಭಟ್ ಕಾರ್ಯಕ್ರಮ ನಿರೂಪಿಸಿದರು