UDUPI
ಕಾಮಗಾರಿ ಪ್ರಾರಂಭ ಕುರಿತು ಡಿಸಿಗೆ ಕೂಡಲೇ ವರದಿ ನೀಡಿ: ಪ್ರಮೋದ್ ಮಧ್ವರಾಜ್
ಕಾಮಗಾರಿ ಪ್ರಾರಂಭ ಕುರಿತು ಡಿಸಿಗೆ ಕೂಡಲೇ ವರದಿ ನೀಡಿ: ಪ್ರಮೋದ್ ಮಧ್ವರಾಜ್
ಉಡುಪಿ, ಮಾರ್ಚ್ 16 : ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದಿಂದ ಮಂಜೂರಾತಿ ದೊರೆತು , ಈಗಾಗಲೇ ಕಾಮಗಾರಿ ಪ್ರಾರಂಭಿಸಿರುವ ಕುರಿತಂತೆ, ಕಾಮಗಾರಿಗಳ ಸಂಪೂರ್ಣ ವಿವರಗಳನ್ನು ಜಿಲ್ಲಾಧಿಕಾರಿಗಳಿಗೆ ತಕ್ಷಣವೇ ಕಳುಹಿಸುವಂತೆ ಎಲ್ಲಾ ಇಲಾಖೆಗಳ ಇಂಜಿನಿಯರ್ ಗಳಿಗೆ ರಾಜ್ಯದ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸೂಚಿಸಿದ್ದಾರೆ.
ಅವರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಇಂಜಿನಿಯರ್ಸ್ ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಕಾಮಗಾರಿಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ ಆದರೆ ಈಗಾಗಲೇ ಪ್ರಾರಂಭಿಸಿರುವ ಕಾಮಗಾರಿಗಳನ್ನು ಮುಂದುವರೆಸಲು ಸಾಧ್ಯವಿದೆ ಆದ್ದರಿಂದ ಬಾಕಿ ಇರುವ ಕಾಮಗಾರಿಗಳನ್ನು ಪ್ರಾರಂಭಿಸಿ,
ಅದರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ತಕ್ಷಣವೇ ಕಳುಹಿಸುವಂತೆ ಸೂಚಿಸಿದ ಸಚಿವರು, ನೀತಿ ಸಂಹಿತೆಯ ಕಾರಣದಿಂದ ಸಾರ್ವಜನಿಕರ ಉಪಯೋಗಕ್ಕೆ ಮಂಜೂರಾದ ಕಾಮಗಾರಿಗಳ ಅಭಿವೃದ್ದಿಗೆ ಅಡಚಣೆಯಾಗಬಾರದು ,
ಆದ್ದರಿಂದ ಅಧಿಕಾರಿಗಳು ಬಾಕಿ ಇರುವ ಕಾಮಗಾರಿಗಳನ್ನೂ ಸಹ ತಕ್ಷಣವೇ ಪ್ರಾರಂಭಿಸುವಂತೆ ಸಚಿವರು ಸೂಚಿಸಿದರು.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿನ ಕೊಳಗೇರಿಗಳಲ್ಲಿ 30 ಕೋಟಿ ವೆಚ್ಚದಲ್ಲಿ 500 ಮನೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಆಗಿದ್ದು, ಕೂಡಲೇ ಕಾಮಗಾರಿ ಆರಂಭಿಸುವುದಾಗಿ ಸ್ಲಂ ಬೋರ್ಡ್ ಅಧಿಕಾರಿಗಳು ತಿಳಿಸಿದರು.
ಉಡುಪಿ-ಮಣಿಪಾಲ ರಸ್ತೆಗಳಲ್ಲಿ ಗುಂಡಿ ಮುಚ್ಚಲು 30 ಲಕ್ಷ ರೂ ವೆಚ್ಚದಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕುಡಿಯುವ ನೀರು ಸರಬರಾಜು ಕುರಿತಂತೆ, ಬೇಸಿಗೆಯಲ್ಲಿ ಯಾವುದೇ ತೊಂದರೆ ಆಗದಂತೆ ಅಗತ್ಯ ಸಿಬ್ಬಂದಿ ಮತ್ತು ಸಾಮಗ್ರಿಗಳನ್ನು ಸಿದ್ದವಾಗಿಟ್ಟುಕೊಂಡು, ದೂರು ಬಂದಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾಗುವಂತೆ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಅವಧಿಯಲ್ಲಿ, 825.25 ಕೋಟಿ ರೂ ವೆಚ್ಚದಲ್ಲಿ ವಿವಿಧ 5465 ಕಾಮಗಾರಿಗಳು ಮಂಜೂರಾಗಿದ್ದು, 565.62 ಕೋಟಿ ರೂ ವೆಚ್ಚದಲ್ಲಿ 4890 ಕಾಮಗಾರಿಗಳು ಈಗಾಗಲೇ ಮುಕ್ತಾಯಗೊಂಡಿದ್ದು, 140.13 ಕೋಟಿ ರೂ ವೆಚ್ಚದ 370 ಕಾಮಗಾರಿಗಳು ಪ್ರಗತಿಯಲ್ಲಿವೆ,
119.60 ಕೋಟಿ ರೂ ವೆಚ್ಚದ 205 ಕಾಮಗಾರಿಗಳು ಪ್ರಾರಂಭಿಸಲು ಬಾಕಿ ಇವೆ ಎಂದು ತಿಳಿಸಿದ ಸಚಿವರು, ಶೀಘ್ರದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಪ್ರಾರಂಬಿಸುವಂತೆ ಇಂಜಿನಿಯರ್ಸ್ ಗಳಿಗೆ ಸೂಚಿಸಿದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್, ವಾರಾಹಿ ಯೋಜನೆಯ ಕಾರ್ಯ ನಿರ್ವಾಹಕ ಇಂಜನಿಯರ್ ಕೃಷ್ಣರಾವ್ ಉಪಸ್ಥಿತರಿದ್ದರು.