Connect with us

    DAKSHINA KANNADA

    ಮಂಗಳೂರು ಅಳಕೆ ರಾಜಕಾಲುವೆ ತಡೆಗೋಡೆ ಕುಸಿತಕ್ಕೆ ಕಳಪೆ ಗುಣಮಟ್ಟದ ಕಾಮಗಾರಿ, ಶಾಸಕ ವೇದವ್ಯಾಸ ಕಾಮತ್ ನೇರ ಹೊಣೆ ;DYFI

    ಮಂಗಳೂರು :ಮಂಗಳೂರು ನಗರದ ಅಳಕೆ ರಾಜಕಾಲುವೆ ತಡೆಗೋಡೆ ಕುಸಿತಕ್ಕೆ ಕಳಪೆ ಗುಣಮಟ್ಟದ ಕಾಮಗಾರಿ ಮತ್ತು ಶಾಸಕ ವೇದವ್ಯಾಸ ಕಾಮತ್ ನೇರ ಹೊಣೆ ಎಂದು ಡಿವೈಎಫ್‌ಐ  ಆರೋಪಿಸಿದೆ.

    ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಡಿವೈಎಫ್‌ಐ ಪ್ರತೀ ವರ್ಷ ಮಂಗಳೂರಿನಲ್ಲಿ ಸುರಿಯುವ ಮಳೆಯಿಂದ ರಾಜಕಾಲುವೆಗಳು ತುಂಬಿ ಹರಿದು ಸುತ್ತಮುತ್ತಲ ತಗ್ಗು ಪ್ರದೇಶದ ಮನೆಮಠ ಅಂಗಡಿ ಮುಂಗಟ್ಟುಗಳಿಗೆ ನೀರು ತುಂಬುವ ಮೂಲಕ ಸೃಷ್ಟಿಯಾಗುವ ಕೃತಕ ನೆರೆಯಿಂದ ರಕ್ಷಿಸಿಕೊಳ್ಳಲು ಸಣ್ಣ ನೀರಾವರಿ ಯೋಜನೆಯಡಿ ಅಳಕೆ ಪ್ರದೇಶದಲ್ಲಿರುವ ರಾಜಕಾಲುವೆಗೆ ಇತ್ತೀಚೆಗೆ ನಿರ್ಮಿಸಿರುವ ತಡೆಗೋಡೆ ನಗರದಲ್ಲಿ ಎಡೆಬಿಡದೆ ಸುರಿದ ಒಂದೆರಡು ಮಳೆಗೆ ಕುಸಿತಗೊಂಡಿದೆ. ಇದು ಮೇಲ್ನೋಟಕ್ಕೆ ಕಳಪೆ ಗುಣಮಟ್ಟದ ಕಾಮಗಾರಿಯಂತೆ ಕಂಡಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಡಿವೈಎಫ್ಐ ಹಾಗೂ ಸಮಾನ ಮನಸ್ಕ ಸಂಘಟನೆಗಳು ಒತ್ತಾಯಿಸಿದೆ. ಈ ರೀತಿಯ ಕಳಪೆ ಗುಣಮಟ್ಟದ ತಡೆಗೋಡೆ ಕುಸಿಯಲು ಶಾಸಕ ವೇದವ್ಯಾಸ ಕಾಮತರೇ ನೇರ ಹೊಣೆ ಎಂದು ಆರೋಪಿಸಿದೆ.

    ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುದ್ರೋಳಿ ಸಮೀಪದ ಅಳಕೆ ರಾಜಕಾಲುವೆಯಲ್ಲಿ ಪ್ರತೀ ವರುಷ ಮಳೆಗಾಲದ ವೇಳೆ ನೀರು ತುಂಬಿ ಸೃಷ್ಟಿಯಾಗುವ ಕೃತಕ ನೆರೆಯಿಂದ ಹತ್ತಿರದ ತಗ್ಗು ಪ್ರದೇಶದ ಮನೆಗಳಿಗೆ ಅಂಗಡಿ ಮುಂಗಟ್ಟುಗಳಿಗೆ ಹರಿದ ಪರಿಣಾಮ ಈ ಭಾಗದ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ. ಈ ಬಗ್ಗೆ ರಾಜಕಾಲುವೆಗಳಲ್ಲಿ ಹೂಳೆತ್ತುವ ಮತ್ತು ತಡೆಗೋಡೆ ನಿರ್ಮಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯು ತನ್ನ 2.5 ಕೋಟಿ ಮೌಲ್ಯದ ಯೋಜನೆಯಡಿ ಅಂದಾಜು 20 ಲಕ್ಷ ಮೊತ್ತದ ತಡೆಗೋಡೆಯನ್ನು ನಿರ್ಮಿಸಲು ಒಪ್ಪಿಗೆ ಸೂಚಿಸಿದೆ. ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರನೊಬ್ಬ ಸರಿಯಾದ ಯೋಜನೆಗಳನ್ನು ರೂಪಿಸದೆ ತರಾತುರಿಯಲ್ಲಿ ತಡೆಗೋಡೆ ಕಾಮಗಾರಿ ನಡೆಸಿ ಮುಗಿಸಿದೆ. ಕಾಮಗಾರಿ ಮುಗಿದು ವಾರಕಳೆದ ನಂತರ ಒಂದೆರಡು ದಿನ ಸತತವಾಗಿ ಸುರಿದ ಸಣ್ಣ ಮಳೆಗೆ ಕಾಲುವೆ ತಡೆಗೋಡೆ ಕುಸಿತಗೊಂಡಿದೆ ಎಂದರೆ ಈ ಕಾಮಗಾರಿಯ ಗುಣಮಟ್ಟದ ಬಗ್ಗೆ ಜನಸಾಮಾನ್ಯರ ನಡುವೆ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ‌. ಮೇಲ್ನೋಟಕ್ಕೆ ತಡೆಗೋಡೆ ರಚನೆಯನ್ನು ವಿವರವಾದ ಯೋಜನಾ ವರದಿ (DPR- Detailed project report) ಆಧಾರದ ಮೇಲೆ ಕಾಮಗಾರಿ ಕೆಲಸಗಳಲ್ಲಿ ಲೋಪಗಳು ನಡೆದಿರುವ ಬಗ್ಗೆ ಹೆಚ್ಚು ಸಾಧ್ಯತೆಗಳಿವೆ. ಮಾತ್ರವಲ್ಲ ಕಾಮಗಾರಿ ನಿರ್ಮಾಣದ ವೇಳೆ ಅವುಗಳ ಅಡಿಪಾಯ ಮತ್ತು ಬಳಸಿದ ಕಟ್ಟಡ ಸಾಮಾಗ್ರಿಗಳು ಕಳಪೆ ಗುಣಮಟ್ಟದ್ದಾಗಿರುವ ಬಗ್ಗೆ ಬಲವಾದ ಅನುಮಾನಗಳಿವೆ. ಜನರ ತೆರಿಗೆ ಹಣದಿಂದ ನಿರ್ಮಾಣವಾಗುವ ಯೋಜನೆಗಳ ಕಾಮಗಾರಿಗಳನ್ನು ಮೇಲುಸ್ತುವಾರಿ ವಹಿಸಬೇಕಾಗಿದ್ದ ಸ್ಥಳೀಯ ಶಾಸಕ ವೇದವ್ಯಾಸ ಕಾಮತರು ದಿನಾ ಓಡಾಡುವ ತಮ್ಮ ರಸ್ತೆಯ ಆಸುಪಾಸಿನಲ್ಲಿ ನಡೆಯುವ ಕಾಮಗಾರಿಗಳನ್ನು ಪರಿಶೀಲಿಸದೆ ಇರೋದು ಇವರ ಬೇಜವಾಬ್ದಾರಿ ನಡೆಯಾಗಿದೆ. ಈ ರೀತಿಯ ಕಳಪೆ ಗುಣಮಟ್ಟದ ಕಾಮಗಾರಿಗೆ ಅಳಕೆ ತಡೆಗೋಡೆ ಕುಸಿಯಲು ಶಾಸಕ ವೇದವ್ಯಾಸ ಕಾಮತರೇ ನೇರ ಹೊಣೆಯಾಗಲಿದ್ದಾರೆ‌.

    ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕು. ನೂತನವಾಗಿ ನಿರ್ಮಿಸಿರುವ ತಡೆಗೋಡೆ ಈ ರೀತಿ ಏಕಾಏಕಿ ಕುಸಿಯಲು ಹಿಂದಿರುವ ಕಾರಣಗಳನ್ನು ಪತ್ತೆಹಚ್ಚಬೇಕು. ಕಾಮಗಾರಿಗೆ ಬಳಸಿದ ಕಟ್ಟಡ ಸಾಮಾಗ್ರಿಗಳನ್ನು ಸರಕಾರಿ ಅಂಗ ಸಂಸ್ಥೆ( NITK ಸುರತ್ಕಲ್ ನಂತಹ)ಯಲ್ಲಿ ಅದರ ಗುಣಮಟ್ಟದ ತನಿಖೆ ನಡೆಸಬೇಕು. ಕಳಪೆ ಕಾಮಗಾರಿಯಲ್ಲಿ ಶಾಮೀಲಾಗಿರುವ ಎಲ್ಲಾ ಕಾಣದ ಕೈಗಳನ್ನು ಬಯಲುಗೊಳಿಸಬೇಕು. ತಪ್ಪಿತಸ್ಥ ಗುತ್ತಿಗೆದಾರರ ಕೈಯಲ್ಲಿರುವ ಇತರೆ ಕಾಮಗಾರಿ ಕೆಲಸಗಳನ್ನು ತಡೆಯೊಡ್ಡಿ ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಸಣ್ಣ ನೀರಾವರಿ ಯೋಜನೆಯಡಿಯಲ್ಲಿ ಕಳೆದ 5 ವರುಷಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಎಲ್ಲಾ ಪ್ರಗತಿ ಕಾಮಗಾರಿಗಳನ್ನು ಪುನರ್ ತನಿಖೆಗೊಳಪಡಿಬೇಕೆಂದು ಡಿವೈಎಫ್ಐ ಮತ್ತು ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply