LATEST NEWS
ಎರಡು ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಗುಂಡಿಗಳ ಮುಚ್ಚಲಾಗುವುದು – ಶಾಸಕ ವೇದವ್ಯಾಸ ಕಾಮತ್
ಮಂಗಳೂರು ಅಗಸ್ಟ್ 18: ಇತ್ತೀಚೆಗೆ ನಡೆದ ರಸ್ತೆ ಅಪಘಾತಗಳನ್ನು ಮನಗಂಡು ಅದರಲ್ಲೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಗುಂಡಿಯನ್ನು ಸರಿಪಡಿಸಲು ಸೂಚನೆ ನೀಡಲಾಗಿದ್ದು ವಿವಿಧ ಕಡೆಗಳಲ್ಲಿ ರಸ್ತೆ ಗುಂಡಿಗಳನ್ನು ಸರಿಪಡಿಸಲಾಗಿದೆ. ಬಾಕಿಯುಳಿದಿರುವ ರಸ್ತೆ ಗುಂಡಿಗಳನ್ನು 2 ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.
ಪಾಲಿಕೆ ಆಯುಕ್ತರು, ಮೇಯರ್, ಪಾಲಿಕೆ ಮುಖ್ಯ ಸಚೇತಕರು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಕಾಮತ್, ಮಂಗಳೂರು ನಗರ ದಕ್ಷಿಣ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಲು ಪಾಲಿಕೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು. ಸದ್ಯ ಪಾಲಿಕೆಯಿಂದ ನೀಡಲಾಗಿರುವ ವಾಟ್ಸ್ ಆಪ್ ಸಂಖ್ಯೆಗೆ ಹಲವರು ಭಾವಚಿತ್ರಗಳನ್ನು ಕಳಿಸಿದ್ದಾರೆ. ಆ ಎಲ್ಲಾ ಗುಂಡಿಗಳನ್ನು ಮುಚ್ಚುವ ಕೆಲಸ ನಾಳೆಯಿಂದ ಪ್ರಾರಂಭವಾಗಲಿದೆ. ನಗರದಲ್ಲಿ 2 ವರ್ಷಗಳಲ್ಲಿ ಸುರಿಯುವ ಪ್ರಮಾಣದ ಮಳೆ ಒಂದೇ ತಿಂಗಳಿನಲ್ಲಿ ಸುರಿದ ಪರಿಣಾಮ ರಸ್ತೆ ಗುಂಡಿಗಳು ನಿರ್ಮಾಣವಾಗಿದೆ. ವರ್ಷದ 7 ತಿಂಗಳ ಮಳೆಯ ಸಂದರ್ಭದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಳೆಯ ಸಂದರ್ಭದಲ್ಲಿ ಡಾಮರು ಅಳವಡಿಸಿದರೂ ಎದ್ದು ಹೋಗುತ್ತಿರುವ ಕಾರಣ ಕಾಮಗಾರಿ ಸ್ಥಗಿತಗೊಂಡಿತ್ತು ಎಂದು ಹೇಳಿದರು.
ನಗರದ ವಿವಿಧ ಕಡೆಗಳಲ್ಲಿ ಸ್ಮಾರ್ಟ್ ಸಿಟಿ, ಕೆಯುಡಿಎಫ್ಸಿ, ಜಲಸಿರಿ, ಗೈಲ್ ಗ್ಯಾಸ್ ಕಾಮಗಾರಿಗಳು ನಡೆಯುತ್ತಿವೆ. ಕೋವಿಡ್ ಕಾರಣಗಳಿಂದ ಸಾವಿರಾರು ವಲಸೆ ಕಾರ್ಮಿಕರು ಊರಿಗೆ ತೆರಳಿದ್ದು ನಿರೀಕ್ಷಿತ ಮಟ್ಟದಲ್ಲಿ ಕಾರ್ಮಿಕರು ವಾಪಸಾಗದೆ ಇರುವ ಕಾರಣ 2 ವರ್ಷಗಳಿಂದ ಕಾಮಗಾರಿಯ ವಿಳಂಬವಾಗಿದೆ. ಅತೀ ಶೀಘ್ರದಲ್ಲಿ ಕಾಮಗಾರಿಗಳನ್ನು ಅನುಷ್ಠಾನ ಮಾಡದಿದ್ದರೆ ಅನುದಾನದ ವಾಯಿದೆ ಮುಕ್ತಾಯವಾಗುವ ಕಾರಣದಿಂದ ಕೆಲಸಗಳಿಗೆ ವೇಗ ನೀಡಲಾಗಿದೆ. ಆದರೆ ಅದೇ ಸಂದರ್ಭದಲ್ಲಿ ವಿಪರೀತ ಮಳೆಯ ಕಾರಣ ಸಮಸ್ಯೆಯಾಗುತ್ತಿದೆ.
#patholeSeAzadi ಅಭಿಯಾನದ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ ಹಾಗೂ ಪಾಲಿಕೆ ವ್ಯಾಪ್ತಿಯ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಡಾಮರು ಕಂಪನಿಗಳೂ ಸ್ಥಗಿತಗೊಳ್ಳುವ ಕಾರಣ ಸಾರ್ವಜನಿಕರಿಗೆ ಸಮಸ್ಯೆಗಳಾಗಿರುವ ಕುರಿತು ವಿಷಾದಿಸುತ್ತೇವೆ ಎಂದು ಶಾಸಕ ಕಾಮತ್ ಹೇಳಿದರು.