LATEST NEWS
ಮಳೆಗಾಲಕ್ಕೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದೆ ಕಾಂಗ್ರೆಸ್ ಆಡಳಿತದ ನಿರ್ಲಕ್ಷ್ಯ – ಶಾಸಕ ಕಾಮತ್ ಆಕ್ರೋಶ

ಮಂಗಳೂರು ಎಪ್ರಿಲ್ 11: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಾಜಕಾಲುವೆಗಳಲ್ಲಿ ಹಾಗೂ ಚರಂಡಿಗಳಲ್ಲಿ ಹೂಳೆತ್ತುವುದು ಸೇರಿದಂತೆ ಮುಂಬರುವ ಮಳೆಗಾಲಕ್ಕೆ ಯಾವುದೇ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದಿರುವುದನ್ನು ಖಂಡಿಸಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಬಿಜೆಪಿಯ ನಿಕಟ ಪೂರ್ವ ಪಾಲಿಕೆ ಸದಸ್ಯರುಗಳು ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ತುರ್ತು ಕ್ರಮಕ್ಕೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಮಾರ್ಚ್ ಅಂತ್ಯದ ವೇಳೆಗೆ ರಾಜಕಾಲುವೆಗಳಲ್ಲಿ ಹಾಗೂ ಚರಂಡಿಗಳಲ್ಲಿ ಹೂಳೆತ್ತುವುದು ಸೇರಿದಂತೆ ಮಳೆಗಾಲದ ಪೂರ್ವ ಸಿದ್ಧತೆಗಳ ಕುರಿತು ಕಾರ್ಯ ಚಟುವಟಿಕೆಗಳು ಆರಂಭವಾಗುತ್ತಿದ್ದವು. ಆದರೆ ಪ್ರಸ್ತುತ ಪಾಲಿಕೆಯಲ್ಲಿ ಬಿಜೆಪಿಯ ಅವಧಿಯು ಮುಗಿದ ಪರಿಣಾಮ ರಾಜ್ಯ ಕಾಂಗ್ರೆಸ್ ಸರ್ಕಾರದ ಅಧೀನದಲ್ಲಿರುವ ಜಿಲ್ಲಾಡಳಿತ ಹಾಗೂ ಮ.ನ.ಪಾ ಅಧಿಕಾರಿಗಳ ಆಡಳಿತ ನಡೆಯುತ್ತಿದ್ದು, ಏಪ್ರಿಲ್ ತಿಂಗಳ ಮಧ್ಯಭಾಗಕ್ಕೆ ಬಂದರೂ ಯಾವುದೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೆತ್ತಿಕೊಂಡಿಲ್ಲ. ಇದೇ ಕಾರಣಕ್ಕೆ ಇತ್ತೀಚಿಗೆ ಸುರಿದ ಸಣ್ಣ ಮಳೆಗೂ ರಾಜಕಾಲುವೆ ನೀರು ಮನೆಗೆ ನುಗ್ಗಿದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಜಿಲ್ಲಾ ಉಸ್ತುವಾರಿ ಸಚಿವರು ರಾಜಕಾಲುವೆ ಹಾಗೂ ಚರಂಡಿಗಳ ಹೂಳೆತ್ತುವಿಕೆ, ನಗರ ಭಾಗದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ, ಮರಗಳ ಅಪಾಯಕಾರಿ ಗೆಲ್ಲುಗಳನ್ನು ತೆರವುಗೊಳಿಸುವುದು, ನಗರದೆಲ್ಲೆಡೆ ವಿಪರೀತವಾಗಿರುವ ಕಸದ ಸಮಸ್ಯೆಗಳ ಬಗ್ಗೆ ಕನಿಷ್ಠ ಒಮ್ಮೆಯಾದರೂ ಪಾಲಿಕೆ ಅಧಿಕಾರಿಗಳ ಸಭೆ ನಡೆಸಬೇಕಿತ್ತು. ಆದರೆ ಆ ಬಗ್ಗೆ ಚಿಂತನೆಯೇ ಅವರಲ್ಲಿ ಇಲ್ಲವಾದ ಮೇಲೆ ಅಧಿಕಾರಿಗಳು ಕೂಡಾ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಹಾಗಾಗಿ ಮಂಗಳೂರಿನ ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರವು ಉದ್ದೇಶಪೂರ್ವಕವಾಗಿ ನಮ್ಮ ಜಿಲ್ಲೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯನ್ನು ಹೇಗೆ ಕಡೆಗಣಿಸುತ್ತಿದೆ ಎಂಬುದರ ಸತ್ಯ ದರ್ಶನವಾಗಿದೆ. ಮಂಗಳೂರಿನ ಜನತೆಯ ಸಮಸ್ಯೆಗೆ ಬಿಜೆಪಿಯು ಧ್ವನಿಯಾಗಿದ್ದು ಮುಂದಿನ ನಾಲ್ಕೈದು ದಿನಗಳಲ್ಲಿ ಪಾಲಿಕೆ ಅಧಿಕಾರಿಗಳ ಹಾಗೂ ಬಿಜೆಪಿಯ ನಿಕಟ ಪೂರ್ವ ಪಾಲಿಕೆ ಸದಸ್ಯರುಗಳ ಸಭೆಯನ್ನು ನಡೆಸುತ್ತೇವೆ ಎಂದು ಹೇಳಿದ ಶಾಸಕರು ಕೂಡಲೇ ಸರ್ಕಾರವು ಈ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದರು.

ಮಾಜಿ ಮೇಯರ್ ಗಳಾದ ದಿವಾಕರ್ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ನಿಕಟ ಪೂರ್ವ ಪಾಲಿಕೆ ಸದಸ್ಯರುಗಳಾದ ಪೂರ್ಣಿಮಾ, ಗಣೇಶ್ ಕುಲಾಲ್, ಭರತ್ ಕುಮಾರ್, ಮನೋಹರ್ ಕದ್ರಿ, ಜಗದೀಶ್ ಶೆಟ್ಟಿ, ಸಂದೀಪ್ ಗರೋಡಿ, ಶೈಲೇಶ್ ಶೆಟ್ಟಿ, ಕಿಶೋರ್ ಕೊಟ್ಟಾರಿ, ರೇವತಿ ಶ್ಯಾಮ್ ಸುಂದರ್, ರೂಪಶ್ರೀ, ಲೀಲಾವತಿ ಪ್ರಕಾಶ್, ಜಯಶ್ರೀ ಕುಡ್ವ, ಜಯಲಕ್ಷ್ಮಿ ಶೆಟ್ಟಿ, ವೀಣಾ ಮಂಗಳ, ವನಿತಾ ಪ್ರಸಾದ್, ಮೊದಲಾದವರು ಉಪಸ್ಥಿತರಿದ್ದರು
1 Comment