Connect with us

    LATEST NEWS

    ಜನಸಾಮಾನ್ಯರ ಆರೋಗ್ಯದ ಹಿತ ದೃಷ್ಟಿಯಿಂದ ರಾಜ್ಯದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿ :- ಶಾಸಕ ಕಾಮತ್

    ಮಂಗಳೂರು ಜುಲೈ 07: ರಾಜ್ಯಾದ್ಯಂತ ಡೆಂಗ್ಯು ವ್ಯಾಪಕವಾಗಿ ಹರಡುತ್ತಿದ್ದು ಈಗಾಗಲೇ ಸೊಂಕಿತರ ಸಂಖ್ಯೆ 7000 ಸಮೀಪಿಸಿ, ಬಲಿಯಾಗುತ್ತಿರುವ ಪ್ರಕರಣಗಳೂ ಸಹ ದಿನದಿಂದ ದಿನಕ್ಕೆ ಹೆಚ್ಚು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ ವಹಿಸುವುದನ್ನು ಬಿಟ್ಟು ಜನಸಾಮಾನ್ಯರ ಆರೋಗ್ಯದ ಹಿತ ದೃಷ್ಟಿಯಿಂದ ರಾಜ್ಯದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕೆಂದು ಶಾಸಕ ವೇದವ್ಯಾಸ ಕಾಮತ್ ಅವರು ಆಗ್ರಹಿಸಿದರು.


    ಕೋವಿಡ್ ಮಹಾಮಾರಿ ಏನು ಎಂಬುದೇ ಗೊತ್ತಿಲ್ಲದೇ ಇಡೀ ಜಗತ್ತಿನ ಜನರು ಭಯಭೀತರಾಗಿ ತತ್ತರಿಸಿ ಹೋಗಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಯಡಿಯೂರಪ್ಪ ಹಾಗೂ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ, ಹರಸಾಹಸ ಪಟ್ಟು ಸಮರ್ಥವಾಗಿ ಎಲ್ಲವನ್ನು ನಿರ್ವಹಿಸಿ ಜಗತ್ತಿನಾದ್ಯಂತ ಪ್ರಶಂಸನೆಗೊಳಗಾಗಿತ್ತು. ಆಗ ಸರ್ಕಾರವನ್ನು ಟೀಕಿಸುವುದರಲ್ಲೇ ಕಾಲ ಕಳೆದ ಕಾಂಗ್ರೆಸ್ ಇಂದು ಹಲವು ವರ್ಷಗಳಿಂದ ಸಾಮಾನ್ಯ ರೋಗವಾಗಿರುವ ಡೆಂಗ್ಯೂ ನಿಯಂತ್ರಣದ ವಿಷಯದಲ್ಲೇ ವಿಫಲವಾಗಿ ರಾಜ್ಯದ ಜನತೆ ಮುಂದೆ ತಲೆ ತಗ್ಗಿಸಿ ನಿಂತಿದೆ. ಈ ಸೋಂಕಿಗೆ ಮುನ್ನೆಚ್ಚರಿಕೆ ಸಹಿತ ಅಗತ್ಯ ಕ್ರಮಗಳನ್ನು ವಹಿಸಿದ್ದರೂ ಸಾಕಿತ್ತು. ಅದನ್ನೂ ಸಹ ಮಾಡದೇ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿದ ಪರಿಣಾಮ ನಾಡಿನ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಆರೋಪಿಸಿದರು.

     

    ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಉಳಿದ ರಾಜ್ಯಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಆದರೂ ಕರ್ನಾಟಕ ಸರ್ಕಾರ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಹೊರತಾಗಿಯೂ ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು ಡೆಂಗ್ಯೂ ಪರೀಕ್ಷೆಗೆ ಸಾರ್ವಜನಿಕರಿಂದ ದುಬಾರಿ ದರವನ್ನು ವಿಧಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ಹಾಗೂ ಆರೋಗ್ಯ ಇಲಾಖೆ ಈ ಎಲ್ಲದರ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕು. ಜನರ ಆರೋಗ್ಯದ ವಿಷಯದಲ್ಲಿ ಸಣ್ಣ ನಿರ್ಲಕ್ಷ್ಯಕ್ಕೂ ಆಸ್ಪದ ಬೇಡ. ಜಿಲ್ಲೆಯಲ್ಲಿ ಆರಂಭವಾಗಲಿರುವ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಮಾಡುವ ಪ್ರಕ್ರಿಯೆ, ಹೆಸರಿಗೆ ಮಾತ್ರವಲ್ಲದೇ ಪರಿಣಾಮಕಾರಿಯಾಗಿ ಆಗಬೇಕು ಎಂದು ಆಗ್ರಹಿಸಿದರು.

     

    ಇದೇ ವೇಳೆ ಸಾರ್ವಜನಿಕರು ಕೂಡ ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಜಾಗೃತೆ ವಹಿಸಬೇಕು. ನೀರಿನ ಟಬ್, ಸಿಂಟೆಕ್ಸ್, ಬಕೆಟ್ ಗಳಲ್ಲಿ ಈಡಿಸ್ ಸೊಳ್ಳೆಯ ಲಾರ್ವಾಗಳು ಕಂಡು ಬರುತ್ತಿದ್ದು , ನೀರು ಸಂಗ್ರಹಿಸಿ ಇಡುವಾಗ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply