Connect with us

LATEST NEWS

ಆಡಳಿತ ಪಕ್ಷ ಕಾಂಗ್ರೆಸ್ ಎಲ್ಲಾ ನೀತಿ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಶಿಷ್ಟಾಚಾರ ಉಲ್ಲಂಘನೆ – ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು ಮೇ 17: ಜಿಲ್ಲೆಯ ಹಲವಾರು ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆಗಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಗೆ ಆಗಮಿಸಿರುವ ಸಂದರ್ಭದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಎಲ್ಲಾ ನೀತಿ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಶಿಷ್ಟಾಚಾರ ಉಲ್ಲಂಘನೆ ಸಹಿತ ಹಲವಾರು ಲೋಪಗಳನ್ನು ಎಸಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಆರೋಪಿಸಿದರು.


ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟನೆಗೊಳಿಸುತ್ತಿರುವ ಎಲ್ಲಾ ಕಾಮಗಾರಿಗಳು ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳಾಗಿದ್ದು ಅಂದಿನ ಸಂಸದ ನಳಿನ್ ಕುಮಾರ್ ಕಟೀಲ್ ರವರು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದು ಪ್ರಸ್ತುತ ಕ್ಯಾ.ಬ್ರಿಜೇಶ್ ಚೌಟರವರು ಜವಾಬ್ದಾರಿಯನ್ನು ಸಂಸದರಾದ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಮಾನ್ಯ ಪ್ರಧಾನಿಗಳ ಕನಸಿನ ಕೂಸಾದ ಸ್ಮಾರ್ಟ್ ಸಿಟಿಯಿಂದ ಎಲ್ಲಾ ಅನುದಾನಗಳನ್ನು ಪಡೆದುಕೊಂಡು ಪ್ರಧಾನಿಗಳ ಭಾವಚಿತ್ರವನ್ನು ಹಾಕುವ ಸೌಜನ್ಯವನ್ನೂ ತೋರದೇ ಎಲ್ಲವೂ ನಾವೇ ಮಾಡಿದ್ದು ಎಂದು ಬಿಂಬಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಟಿದೆ. ಜಿಲ್ಲಾಧಿಕಾರಿಗಳ ಕಚೇರಿಯನ್ನೂ ಸಹ ಸಂಪೂರ್ಣಗೊಳಿಸಲು ಸುಮಾರು 20 ಕೋಟಿಗೂ ಅಧಿಕ ಹಣವನ್ನು ಸ್ಮಾರ್ಟ್ ಸಿಟಿ ವತಿಯಿಂದಲೇ ಪಡೆದುಕೊಳ್ಳಲಾಗಿದೆ ಹೊರತು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿದ್ದಲ್ಲ ಎಂದರು.

ನಿಂತು ಹೋಗಿದ್ದ ಉರ್ವ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಪ್ರಾಜೆಕ್ಟ್ ಹೇಗಾದರೂ ಮಾಡಿ ಮರು ಆರಂಭಿಸಬೇಕೆಂಬುದು ನನ್ನ ಮಹದಾಸೆಯಾಗಿತ್ತು. ಅದರಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಮ್ಮೆಚೂರ್ ಕಬಡ್ಡಿಯ ಪ್ರಮುಖರಾಗಿದ್ದ ಗಿರಿಧರ್ ಶೆಟ್ಟಿ, ಪುರುಷೋತ್ತಮ ಪೂಜಾರಿ, ರತನ್ ಶೆಟ್ಟಿ ಸೇರಿದಂತೆ ಅನೇಕರನ್ನು ಕೂಡಿಕೊಂಡು, ಸಂಸದರು, ಮಂತ್ರಿಗಳ, ಅಧಿಕಾರಿಗಳ ಸಹಕಾರದೊಂದಿಗೆ ಎಷ್ಟು ಶ್ರಮ ವಹಿಸಿದ್ದೆವು ಎಂಬ ಬಗ್ಗೆ ಈಗ ಉದ್ಘಾಟನೆಗೆ ಹಾತೊರೆಯುತ್ತಿರುವವರಿಗೆ ಅರಿವಿದೆಯಾ? ಉರ್ವ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಜನಪ್ರತಿನಿಧಿಯೇ ಅಲ್ಲದ ಕಾಂಗ್ರೆಸ್ಸಿನ ವ್ಯಕ್ತಿಯೋರ್ವರು ಮೊನ್ನೆಯೇ ಅನಧಿಕೃತವಾಗಿ ಪೂಜೆ ನಡೆಸಿರುವುದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ನಿಯಮಗಳ ಹೆಸರಿನಡಿ ಮಂಗಳೂರು ನಗರದಲ್ಲಿ ಕೋಲ,ನೇಮ, ಬ್ರಹ್ಮಕಲಶ, ಭಜನಾ ಮಂಗಲೋತ್ಸವಗಳಿಗೆ ಶುಭಕೋರಿ ಹಾಕಲಾಗಿದ್ದ ಬ್ಯಾನರ್-ಫ್ಲೆಕ್ಸ್ ಗಳನ್ನು ಕಿತ್ತೆಸೆದಿದ್ದ ಅಧಿಕಾರಿಗಳೇ ಇದೀಗ ಮುಖ್ಯಮಂತ್ರಿಗಳಿಗೆ ಸ್ವಾಗತ ಕೋರಿ ಕಾಂಗ್ರೆಸ್ ನಾಯಕರು ಎಲ್ಲೆಂದರಲ್ಲಿ ಅನಧಿಕೃತವಾಗಿ ಹಾಕಿರುವ ಫ್ಲೆಕ್ಸ್ ಗಳನ್ನು ಮುಟ್ಟುವ ಧೈರ್ಯ ತೋರದೇ ಕೈಕಟ್ಟಿ ಕುಳಿತಿದ್ದಾರೆ.
ಹಕ್ಕುಪತ್ರಗಳೇ ಸಿಗದೇ ಪರಿತಪಿಸುತ್ತಿದ್ದ ಬೆಂಗ್ರೆ, ಬೋಳೂರಿನ ಪರಪು ಹಾಗೂ ಸ್ಮಶಾನ ಪರಿಸರ, ಉರ್ವದ ಕೊರಗಜ್ಜ ಕ್ಷೇತ್ರದ ಪರಿಸರ, ಮೊದಲಾದ ಕಡೆಗಳಲ್ಲೆಲ್ಲಾ ಆರ್.ಅಶೋಕ್ ರವರು ಕಂದಾಯ ಮಂತ್ರಿಗಳಾಗಿದ್ದಾಗ ಎಲ್ಲ ಸಮಸ್ಯೆ ನಿವಾರಿಸಿ 2023ರಲ್ಲಿ 690 ಕ್ಕೂ ಅಧಿಕ ಕುಟುಂಬಗಳಿಗೆ ಹಕ್ಕುಪತ್ರವನ್ನು ನೀಡುವ ಕೆಲಸ ಮಾಡಿದ್ದೆ. ಉಳಿದ ಹಕ್ಕುಪತ್ರ ನೀಡುವ ಸಂದರ್ಭದಲ್ಲಿ ಚುನಾವಣೆ ಬಂದ ಕಾರಣ ಎಲ್ಲವೂ ಸ್ಥಗಿತವಾಯಿತು. ಅಲ್ಲಿಂದ ಇಲ್ಲಿಯವರೆಗೆ ಕಾಂಗ್ರೆಸ್ ಸರ್ಕಾರದ ತಹಸಿಲ್ದಾರ್, ಜಿಲ್ಲಾಧಿಕಾರಿಗಳು, ಸಚಿವರು ಹಾಗೂ ಮುಖ್ಯಮಂತ್ರಿಗಳಿಗೂ ಪದೇಪದೇ ಆಗ್ರಹ ಮಾಡಿದ ಪರಿಣಾಮ 2023 ರಲ್ಲೇ ಸಿದ್ಧವಾಗಿದ್ದ ಹಕ್ಕು ಪತ್ರಗಳನ್ನು ಇದೀಗ ನೀಡಲಾಗುತ್ತಿದೆ. ಅಭಿವೃದ್ಧಿ ಹಾಗೂ ಜನಕಲ್ಯಾಣ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ರಾಜಕಾರಣವನ್ನು ಮಾಡದೇ, ಜನಪರ ಆಡಳಿತಕ್ಕೆ ವಿರೋಧ ಪಕ್ಷಗಳೊಂದಿಗೂ ಕೈಜೋಡಿಸಬೇಕು ಎಂದು ಶಾಸಕರು ಆಗ್ರಹಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *