LATEST NEWS
ವಿದೇಶಿ ಹೆಸರು ಬದಲು ಭಾರತ ಹೆಸರು ಶಾಶ್ವತವಾಗಿರಲಿ: ಶಾಸಕ ಕಾಮತ್

ಮಂಗಳೂರು ಸೆಪ್ಟೆಂಬರ್ 05: ಭರತ ಚಕ್ರವರ್ತಿ ಆಳಿದ ನಾಡನ್ನು ‘ಭಾರತ’ ಎಂದು ಕರೆಯುವುದು ಸೂಕ್ತವಾದದ್ದು ಮತ್ತು ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟು ಇಂಡಿಯಾ ಎಂಬ ಪದದ ಬದಲಾಗಿ ‘ಭಾರತ’ ಎಂಬ ಹೆಸರನ್ನು ಎಲ್ಲ ದಾಖಲೆಗಳಲ್ಲಿ ಶಾಶ್ವತವಾಗಿ ಬದಲಾಯಿಸಬೇಕು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯಾ ಎಂಬ ಪದವು ದಾಸ್ಯದ ಸಂಕೇತವಾಗಿದೆ. ಶತಮಾನಗಳ ಕಾಲ ಈ ದೇಶವನ್ನು ಲೂಟಿ ಮಾಡಿದ ವಿದೇಶಿಯರು ಈ ನಾಡಿಗೆ ಇಟ್ಟ ಹೆಸರು ಇದಾಗಿದೆ. ಆದರೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭರತಖಂಡ ಸಾಂಸ್ಕೃತಿಕವಾಗಿ ಅತ್ಯಂತ ಸಂಪದ್ಭರಿತ ನಾಡು. ಹಾಗಾಗಿ ಶತ, ಶತಮಾನಗಳಿಂದ ಬಂದ ಹೆಸರಾಗಿರುವ ‘ಭಾರತ’ ಎಂಬ ಹೆಸರನ್ನು ಶಾಶ್ವತವಾಗಿ ದಾಖಲೆಯಲ್ಲಿ ಅಳವಡಿಸಬೇಕು. ಸಾಂಸ್ಕೃತಿಕವಾಗಿ ಅರ್ಥಗರ್ಭಿತ ಹೆಸರು ಈ ದೇಶಕ್ಕೆ ಇರುವಾಗ ವಿದೇಶಿಯರು ನಾಮಕರಣ ಮಾಡಿದ ಹೆಸರಿನ ಅಗತ್ಯತೆ ನಮಗಿಲ್ಲ ಎಂದು ಅವರು ಹೇಳಿದರು.

ಆಂಗ್ಲರ ಮತ್ತು ಬೇರೆ ವಿದೇಶೀಯವರ ಎಲ್ಲ ಭೂಪಟಗಳಲ್ಲಿ ಭಾರತ ಎನ್ನುವ ಸ್ವದೇಶೀ ಹೆಸರಿನ ಬದಲು ‘ಇಂಡಿಯಾ’ ಎಂಬ ಹೆಸರನ್ನು ಅಚ್ಚು ಹಾಕಿಸಿದವರು ಬ್ರಿಟಿಷ್ ಆಡಳಿತ. ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಈ ಹೆಸರನ್ನು ಅಳಿಸಿ ‘ಭಾರತ’ ಎಂದು ಬದಲಾಯಿಸಲು ಹೊರಟಿರುವ ದಿಟ್ಟ ನಿರ್ಧಾರ ಸ್ವಾಗತಾರ್ಹ. ಇದಕ್ಕಾಗಿ ಪ್ರಧಾನಿ ಅವರನ್ನು ಅಭಿನಂದಿಸಲಾಗುವುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ವಿದೇಶಿ ವ್ಯಾಮೋಹ ಇರುವವರು ಈಗ ಭಾರತ ಹೆಸರಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಹಾಸ್ಯಾಸ್ಪದ. ರಾಜಕೀಯ ಕಾರಣದಿಂದ ದೇಶದ ಹೆಸರಿನ ಬಗ್ಗೆ ಅಗೌರವ ತೋರಿಸುತ್ತಿರುವುದು, ವಿರೋಧ ವ್ಯಕ್ತಪಡಿಸುವುದು ದುರ್ದೈವ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.