BELTHANGADI
ಬೆಳ್ತಂಗಡಿ – ಬಿಜೆಪಿ ಶಾಸಕ ಹರೀಶ್ ಪೂಂಜಾ ಬಂಧನ ಯತ್ನ – ಈ ಬಾರಿ ಅಧೀವೇಶನ ನಡೆಯಲು ಬಿಡಲ್ಲ – ಸುನಿಲ್ ಕುಮಾರ್
ಬೆಳ್ತಂಗಡಿ ಮೇ 23: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ರಾಜಕೀಯ ದುರುದ್ದೇಶ ಮತ್ತು ದ್ವೇಷ ಇಟ್ಟುಕೊಂಡು ಬಂಧಿಸುವ ಯತ್ನ ಮಾಡಿದ್ದಾರೆ. ಈ ಘಟನೆಯನ್ನು ಇಷ್ಟಕ್ಕೇ ಬಿಡುವುದಿಲ್ಲ, ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ನಿನ್ನೆ ರಾತ್ರಿ ಶಾಸಕ ಹರೀಶ್ ಪೂಂಜ ಬೆಳ್ತಂಗಡಿ ಠಾಣೆಗೆ ಹಾಜರಾದ ಸಂದರ್ಭದಲ್ಲಿ ಆಗಮಿಸಿದ್ದ ಸುನಿಲ್ ಕುಮಾರ್, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಕ್ರಿಮಿನಲ್ ಚಟುವಟಿಕೆ ನಡೆಸುವವರನ್ನು ಪೊಲೀಸರು ನೇರ ಕಾರ್ಯಾಚರಣೆ ಮೂಲಕ ಬಂಧಿಸುವುದನ್ನು ನೋಡಿದ್ದೇವೆ. ಇಲ್ಲಿ ಒಬ್ಬ ಜನಪ್ರತಿನಿಧಿಯನ್ನು ಈ ರೀತಿ ಬಂಧಿಸಲು ಬಂದಿರುವುದು ರಾಜಕೀಯ ಹುನ್ನಾರ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಹಾಕಿದವರನ್ನು ಬಂಧಿಸುವುದು ಬಿಡಿ, ಎಫ್ಐಆರ್ ಹಾಕುವುದಕ್ಕೂ ನಾಲ್ಕು ದಿನ ತೆಗೆದುಕೊಂಡಿದ್ದರು. ಇಲ್ಲಿ ಒಬ್ಬ ಶಾಸಕನನ್ನು ಎಫ್ಐಆರ್ ದಾಖಲಿಸಿ, ಬಂಧನ ಮಾಡಲು ಬರುತ್ತಾರಂದ್ರೆ ಸಾಮಾನ್ಯ ಜನರು ಬದುಕೋದು ಹೇಗೆ ಎಂದು ಪ್ರಶ್ನೆ ಮಾಡಿದರು.
ಹರೀಶ್ ಪೂಂಜ ಕಾನೂನಿಗೆ ಬೆಲೆ ಕೊಟ್ಟು ಠಾಣೆಗೆ ಹಾಜರಾಗಿದ್ದಾರೆ. ಸಂಜೆ ವೇಳೆ ನೋಟೀಸ್ ಕೊಟ್ಟಿದ್ದಾರೆ, ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಈ ಪ್ರಕರಣವನ್ನು ಇಷ್ಟಕ್ಕೇ ಬಿಡುವುದಿಲ್ಲ, ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಶಾಸಕನ ಹಕ್ಕನ್ನೂ ಕಸಿದುಕೊಳ್ಳುವ ಯತ್ನ ಮಾಡಿದ್ದಾರೆ. ಈ ಕುರಿತು ಗೃಹ ಸಚಿವರನ್ನು ಭೇಟಿಯಾಗುತ್ತೇವೆ, ಗೂಂಡಾಗಿರಿ ತೋರಿದ ಪೊಲೀಸ್ ಅಧಿಕಾರಿಗಳ ಬಗ್ಗೆ ಕ್ರಮಕ್ಕೆ ಆಗ್ರಹಿಸುತ್ತೇವೆ. ಪೊಲೀಸರು ಗೂಂಡಾಗಿರಿ ನಡೆಸುವುದಕ್ಕೆ ಇರೋದಲ್ಲ. ಸಾರ್ವಜನಿಕರು, ಜನಪ್ರತಿನಿಧಿ ಜೊತೆಗೆ ಪೊಲೀಸರು ಗೌರವದಿಂದ ನಡೆದುಕೊಳ್ಳಬೇಕು. ಮುಂದಿನ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇವೆ, ಅಧಿವೇಶನ ಆಗಲು ಬಿಡುವುದಿಲ್ಲ ಎಂದು ಹೇಳಿದರು.