LATEST NEWS
ವಿಟ್ಲ ಉಪನೊಂದಣಾಧಿಕಾರಿಯನ್ನು ತರಾಟೆಗೆ ತೆಗದುಕೊಂಡ ಶಾಸಕ ಸಂಜೀವ ಮಠಂದೂರು
ಪುತ್ತೂರು : ಸಾರ್ವಜನಿಕರ ದೂರಿನ ಹಿನ್ನಲೆ ವಿಟ್ಲ ಉಪನೋಂದಣಿ ಕಚೇರಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ದಿಢೀರನೆ ಭೇಟಿ ನೀಡಿ ಉಪ ನೋಂದಣಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಿನ್ನೆ ನಡೆದಿದೆ. ವಿಟ್ಲದಲ್ಲಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ವಿವಿಧ ದಾಖಲೆಗಳನ್ನು ನೋಂದಣಿ ಮಾಡಿಕೊಳ್ಳಲು ಜನರು ಪ್ರತಿನಿತ್ಯ ಗಂಟೆಗಟ್ಟಲೇ ಕಾಯುತ್ತಿದ್ದು, ನೋದಣಾಧಿಕಾರಿ ತಡವಾಗಿ ಕಚೇರಿಗೆ ಹಾಜರಾಗುತ್ತಿರುವ ಬಗ್ಗೆ ಸಾರ್ವಜನಿಕರು ಪುತ್ತೂರು ಶಾಸಕರಿಗೆ ದೂರು ನೀಡಿದ್ದರು.
ಇಲ್ಲಿನ ಅಧಿಕಾರಿ ಹಾಗೂ ಸಿಬಂದಿಗಳ ಕಾರ್ಯ ವೈಖರಿಯ ಬಗ್ಗೆ ಸತತವಾಗಿ ದೂರುಗಳು ಬಂದ ಹಿನ್ನಲೆಯಲ್ಲಿ ಶಾಸಕರು ಈ ದಿಡೀರ್ ಭೇಟಿ ನೀಡಿದ್ದಾರೆ. ಕಚೇರಿಯ ಮುಂದೆ ಮೈಲುದ್ದದ ಸಾಲು ಇರುವಾಗಲೇ ಸಾಮಾನ್ಯ ನಾಗರೀಕನಂತೆ ಭೇಟಿ ನೀಡಿದ ಶಾಸಕರು ಅಲ್ಲಿ ಕೆಲ ನಿಮಿಷಗಳ ಕಾಲ ಜನರ ಮದ್ಯೆಯೇ ಕಾದು, ಅಲ್ಲಿನ ಕಾರ್ಯ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ, ಅಲ್ಲಿನ ಕಾರ್ಯ ವೈಖರಿಯ ಬಗ್ಗೆ ಆಕ್ರೋಶಗೊಂಡರು.
ನೀವು ಸಾರ್ವಜನಿಕ ರಿಗೆ ಇದೇ ರೀತಿ ಸೇವೆ ನೀಡುವುದಾ ? ಎಂದು ಸಬ್ ರಿಜಿಸ್ಟ್ರಾರ್ ಅನ್ನು ಪ್ರಶ್ನಿಸಿದ ಅವರು “ ನಾನು ಬಂದು ಕೆಲವು ಹೊತ್ತುಗಳ ಕಾಲ ಹೊರಗಡೆ ನಿಂತಿದ್ದೆ. ಶಾಸಕರ ಜೊತೆ ಹೇಗೆ ನಡೆದುಕೊಳ್ಳಬೇಕು ನಿಮಗೆ ಗೊತ್ತಿಲ್ಲ. ಇನ್ನೂ ನೀವು ಜನರನ್ನು ಹೇಗೆ ನಡೆಸಿಕೊಳ್ಳುವಿರಿ ? ನೀವು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಇದೆ” ಎಂದು ಆಕ್ರೋಶಭರಿತರಾದರು.
ಶಾಸಕರ ಆರೋಪಕ್ಕೆ ಉತ್ತರ ನೀಡಿದ ಅಧಿಕಾರಿ ಕಚೇರಿಯಲ್ಲಿ ಸರ್ವರ್ ಸಮಸ್ಯೆ ಇದ್ದು, ಸಿಬ್ಬಂದಿಗಳ ಕೊರತೆ ಇದೆ, ಸದ್ಯ ಕೇವಲ ಇಬ್ಬರು ಸಿಬ್ಬಂದಿಗಳು ಮಾತ್ರ ಇರುವುದು ಎಂದು ತಿಳಿಸಿದರು. ಈ ನಡುವೆ ಕಂಪ್ಯೂಟರ್ ಕೂಡಾ ಕೈ ಕೊಡುತ್ತಿದೆ. ಈ ಸಮಸ್ಯೆಯಿಂದ ಕೆಲಸಕಾರ್ಯ ತಡವಾಗುತ್ತದೆ. ನಾನು ಸಮಯಕ್ಕೆ ಸರಿಯಾಗಿ ಕರ್ತವ್ಯ ಹಾಜರಾಗುತ್ತಿದ್ದೇನೆ. ಟೋಕನ್ ನೀಡಿದ ಎಲ್ಲರ ಕೆಲಸ ನಡೆಯುತ್ತಿದೆ ಎಂದು ಹೇಳಿದರು..ನಮ್ಮ ಸಮಸ್ಯೆಯನ್ನು ಯಾರು ಆಲಿಸುವುದಿಲ್ಲ” ತಮ್ಮ ಅಳಲು ತೋಡಿಕೊಂಡರು .
ಈ ಸಂದರ್ಭ ಮಾತನಾಡಿದ ಶಾಸಕರು ತಾಂತ್ರಿಕ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಸರಿಪಡಿಸುವ ಜವಾಬ್ದಾರಿ ನಿಮ್ಮದಾಗಿದೆ. ತಮ್ಮ ಕೆಲಸ ಕಾರ್ಯಗಳಿಗೆ ಬರುವ ಜನರಿಗೆ ಯಾವುದೇ ಸಮಸ್ಯೆ ಆಗಬಾರದು. ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಹೇಳಿದ ಅವರು ಬಳಿಕ ಮೇಲಾಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿ ಇಲ್ಲಿಯ ಪರಿಸ್ಥಿತಿಯ ಬಗ್ಗೆ ವಿವರಿಸಿ, ತಕ್ಷಣವೇ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸೂಚನೆ ನೀಡಿದರು.