Connect with us

    LATEST NEWS

    ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಧರಣಿ ಅಂತ್ಯ – ಖಾಸಗಿ ಸ್ಥಳಗಳಲ್ಲಿ ಅಧಿಕಾರಿಗಳ ಸಭೆ ಕರೆಯಲು ಅವಕಾಶವಿಲ್ಲ ಎಂದ ಜಿಲ್ಲಾಧಿಕಾರಿ

    ಬೈಂದೂರು, ಆಗಸ್ಟ್ 13: ಶಾಸಕರು ಕರೆದಿರುವ ಸಭೆಗಳಿಗೆ ಅಧಿಕಾರಿಗಳು ಬರದಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ ಎಂದು ಧರಣಿ ಕುಳಿತಿರುವ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಉಡುಪಿ ಜಿಲ್ಲಾಧಿಕಾರಿ ಭರವಸೆ ಹಿನ್ನಲೆ ಅಂತ್ಯಗೊಳಿಸಿದ್ದಾರೆ.


    ಶಾಸಕರ ಸಾಂವಿಧಾನಿಕ ಹಕ್ಕುಗಳನ್ನು ಮೊಟಕು ಗೊಳಿಸುತ್ತಿದೆ ಮತ್ತು ಶಾಸಕರ ಸಭೆಗೆ ಅಧಿಕಾರಿ ಗಳು ಬಾರದಂತೆ ತಡೆಯ ಲಾಗುತ್ತಿದೆ ಎಂದು ಆರೋಪಿಸಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಆರಂಭಿಸಿದ್ದರು. ಶಾಸಕರನ್ನು ಬೈಂದೂರು ತಹಶೀಲ್ದಾರರು, ಕುಂದಾಪುರ ಸಹಾಯಕ ಕಮಿಷನರ್ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದರು ಕೂಡ ಪ್ರಯೋಜನ ವಾಗಿಲ್ಲ. ಮಾತ್ರವಲ್ಲದೆ ಜಿಲ್ಲಾ ಬಿಜೆಪಿ ಮುಖಂಡರು, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಸ್ಥಳ ಆಗಮಿಸಿ ಬೆಂಬಲ ವ್ಯಕ್ತಪಡಿಸಿದ್ದರು.

    ಮಂಗಳವಾರ ಬೆಳಗ್ಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಶಾಸಕರಿಗೆ ಬೆಂಬಲ ಸೂಚಿಸಿದರು. ಬಳಿಕ ಆಗಮಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹಾಗೂ ಎಸ್ಪಿ ಡಾ.ಕೆ. ಅರುಣ್ ಸ್ಥಳಕ್ಕೆ ಭೇಟಿ ನೀಡಿದರು. ತದನಂತರ ತಾಲೂಕು ಕಚೇರಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕಿಶೋರ್ ಕುಮಾರ್, ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮೊದಲಾದವರ ನಿಯೋಗದೊಂದಿಗೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಮಾತುಕತೆ ನಡೆಸಿದರು.

    ಸುಮಾರು ಒಂದು ಗಂಟೆಗಳ ಕಾಲ ನಡೆದ ಮಾತುಕತೆಯ ಬಳಿಕ ಹೊರ ಬಂದ ಜಿಲ್ಲಾಧಿಕಾರಿಯವರಿಗೆ ಶಾಸಕ ಗುರುರಾಜ್ ಗಂಟಿಹೊಳೆ ಮನವಿ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ ಗುರುರಾಜ್, ಶಾಸಕರ ಹಕ್ಕು ಚ್ಯುತಿಯಾಗದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕು. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗೆ ಜನರ ಸೇವೆ ಮಾಡಲು ಅಧಿಕಾರಿಗಳು ಸ್ಪಂದಿಸಬೇಕು. ಅಧಿಕಾರಿಗಳ ಸಭೆ ನಡೆಸಲು ಅಡ್ಡಿಪಡಿಸಬಾರದು. ಇದಕ್ಕೆ ಯಾವುದೇ ರೀತಿಯ ಆಕ್ಷೇಪಗಳಿದ್ದಲ್ಲಿ ಹಿಂಬರಹ ನೀಡಿದರೆ ಕಾನೂನು ರೀತಿ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

    ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ನಾನು ಶಾಸಕರ ಹಕ್ಕುಗಳಿಗೆ ತಡೆಯೊಡ್ಡಿಲ್ಲ. ಕಾನೂನಿನ ಅವಕಾಶವನ್ನು ಸ್ಪಷ್ಟಪಡಿಸಿ ದ್ದೇನೆ. ಸಾಂವಿಧಾನಿಕ ನಿಯಮಗಳನ್ನು ಬಿಟ್ಟು ನಾವು ಕೆಲಸ ಮಾಡಲು ಸಾಧ್ಯ ವಿಲ್ಲ. ಖಾಸಗಿ ಸ್ಥಳಗಳಲ್ಲಿ ಅಧಿಕಾರಿಗಳ ಸಭೆ ಕರೆಯಲು ಅವಕಾಶವಿಲ್ಲ. ಶಾಸಕರ ಖಾಸಗಿ ಕಚೇರಿಗಳಲ್ಲಿ ಸಭೆ ಕರೆಯುವ ಅವಕಾಶಗಳ ಬಗ್ಗೆ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ತಿಳಿಸಲಾಗುವುದು ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *