LATEST NEWS
ಕ್ರೀಡಾಂಗಣ, ಕ್ರೀಡಾ ಸೌಲಭ್ಯಗಳಿಗೆ ಹೆಚ್ಚಿನ ಅನುದಾನ: ಶಾಸಕ ಕಾಮತ್
ಮಂಗಳೂರು: ಕ್ರೀಡೆಗೆ ಮತ್ತು ಕ್ರೀಡಾ ಸೌಲಭ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಭಾರತೀಯ ಜನತಾ ಪಕ್ಷದ ಸರಕಾರ ಬದ್ಧವಾಗಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರಿನ ಜನತೆಗೆ ಕ್ರೀಡಾ ಸೌಲಭ್ಯಗಳನ್ನು ಒದಗಿಸಲು ಹೆಚ್ಚಿನ ಅನುದಾನವನ್ನು ಮಂಜೂರುಗೊಳಿಸಿದ್ದಾರೆ. ರಾಜ್ಯ ಸರಕಾರದ ಪಿಡಬ್ಲ್ಯುಡಿ ಇಲಾಖೆಯ ಅನುದಾನದ ಮೂಲಕ ಲಾಲ್‌ಬಾಗ್‌ನಲ್ಲಿ ವಾಲಿಬಾಲ್ ಮೈದಾನದ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಮಂಗಳೂರು ದಕ್ಷಿಣದ ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.
ಅವರು ಉರ್ವ ಸ್ಟೋರ್‍ನ ಧನ್ಯವಾದ್ ಫ್ರೆಂಡ್ಸ್ ಸರ್ಕಲ್ ಇವರ ವಿಶೇಷ ಮನವಿಯ ಮೇರೆಗೆ ಉರ್ವಸ್ಟೋರ್ ಮೈದಾನವನ್ನು 15 ಲಕ್ಷ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಯುವಕರು ದೈಹಿಕ ಮತ್ತು ಮಾನಸಿಕವಾಗಿ ಹೆಚ್ರಚು ಸದೃಢರಾಗಲು ಕ್ರೀಡಾ ಚಟುವಟಿಕೆಗಳನ್ನು ಹೆಚ್ಚು ಹೆಚ್ಚು ನಡೆಸಬೇಕು. ಅದಕ್ಕೆ ಪ್ರೋತ್ಸಾಹ ನೀಡಲು ಸರಕಾರ ನಾನಾ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಅವರು ನುಡಿದರು.
ಆಟದ ಮೈದಾನಗಳಿಗೆ ಪೂರ್ಣ ಪ್ರಮಾಣದಲ್ಲಿ ಉತ್ತೇಜನ ನೀಡಲು ವಾಲಿಬಾಲ್ ಸ್ಪೋಟ್ಸ್ ಕ್ಲಬ್‌ಗೆ 65 ಸೆಂಟ್ಸ್ ಭೂಮಿ ಮತ್ತು 40 ಲಕ್ಷ ರೂ.ಗಳ ಅನುದಾನ ಒದಗಿಸಲಾಗಿದೆ. ಉರ್ವ ಮೈದಾನದಲ್ಲಿ ಫ್ಲಡ್‌ಲೈಟ್ ಸೌಕರ್ಯ ಒದಗಿಸಲಾಗುತ್ತಿದೆ. ಇಂಟರ್‍ನ್ಯಾಷನಲ್ ಕಬಡ್ಡಿ ಕ್ರೀಡಾಂಗಣವನ್ನು ಮಂಗಳೂರಿನ ಜನತೆಗಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಎಮ್ಮೆಕೆರೆಯಲ್ಲಿ ಸ್ವಿಮ್ಮಿಂಗ್ ಪೂಲ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕರು ವಿವರವಾಗಿ ಮಾಹಿತಿ ನೀಡಿದರು.