LATEST NEWS
ಕಾಲು ನೋವಿನ ನಡುವೆಯೂ ಗದ್ದೆಗಿಳಿದು ನಾಟಿ ಮಾಡಿದ ಶಾಸಕ ಖಾದರ್
ಮಂಗಳೂರು ಜುಲೈ 27: ಹಡಿಲು ಬಿದ್ದಿರುವ ಭೂಮಿಯಲ್ಲಿ ಭತ್ತದ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಮ್ಮ ಕಾಲುನೋವಿನ ನಡುವೆಯೂ ಸ್ವತಃ ಗದ್ದೆಗಳಿದು ನಾಟಿ ಮಾಡುವ ಮೂಲಕ ಶಾಸಕ ಯು.ಟಿ ಖಾದರ್ ಮಾದರಿಯಾಗಿದ್ದಾರೆ.
ಕೋವಿಡ್ ಲಾಕ್‌ಡೌನ್ ಸಮಯವನ್ನು ಸದ್ಬಳಕೆ ಮಾಡಿಕೊಂಡಿರುವ ಸ್ವ ಸಹಾಯ ಸಂಘದ ಸದಸ್ಯರು ಕೊಣಾಜೆಯಲ್ಲಿ ಹಡಿಲು ಗದ್ದೆಯಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ಸ್ವ ಸಹಾಯ ಸಂಘ ಸದಸ್ಯರ ಕೃಷಿ ನಾಟಿ ಕಾರ್ಯಕ್ಕೆ ಶಾಸಕ ಯು.ಟಿ.ಖಾದರ್ ಚಾಲನೆ ನೀಡಿದರು.
ಈ ಸಂದರ್ಭ ಶಾಸಕ ಖಾದರ್ ಅವರು ಪಂಚೆ, ಮುಟ್ಟಾಳೆ ಧರಿಸಿ, ಗದ್ದೆಗಿಳಿದು ಸಾಂಪ್ರದಾಯಿಕವಾಗಿ ಶೈಲಿಯಲ್ಲಿ ನೇಜಿ ನೆಟ್ಟರು. ಸದ್ಯ ಶಾಸಕರ ನಾಟಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಸಂದರ್ಭ ಮಾತನಾಡಿದ ಶಾಸಕ ಖಾದರ್ ‘ಕೋವಿಡ್ ಸಂಕಷ್ಟ ಕಾಲದಲ್ಲಿ ನಾವು ನಕಾರಾತ್ಮಕ ಚಿಂತನೆ ಮಾಡದೆ ಇಂತಹ ಮಾದರಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಹೆಚ್ಚು ಜನರು ಇಂತಹ ಕಾರ್ಯಕ್ಕೆ ಸೇರಬೇಕು’ ಎಂದರು. ಕರಾವಳಿ ಜಿಲ್ಲೆಗಳಲ್ಲಿ ಭತ್ತದ ಕೃಷಿ ಸವಾಲಿನ ಕೆಲಸವಾಗಿದ್ದು, ಹಡಿಲು ಭೂಮಿಯಲ್ಲಿ ಕೃಷಿ ಕೆಲಸ ಮಾಡುತ್ತಿರುವವರಿಗೆ ಸರಕಾರ ವಿಶೇಷ ಪ್ರೋತ್ಸಾಹ ಧನ ನೀಡಬೇಕು ಎಂದರು.