DAKSHINA KANNADA
ಅಕ್ರಮ ಸಕ್ರಮ ಕಡತ ವಿಲೇವಾರಿಗೆ ಲಂಚ ಪಡೆದರೆ ಜೈಲಿಗೆ ಕಳುಹಿಸಿಯೇ ಸಿದ್ದ – ಶಾಸಕ ಅಶೋಕ್ ರೈ ವಾರ್ನಿಂಗ್

ಪುತ್ತೂರು ಎಪ್ರಿಲ್ 23: ‘ಅಕ್ರಮ-ಸಕ್ರಮ ಕಡತ ವಿಲೇವಾರಿಗೆ ಸಂಬಂಧಿಸಿದಂತೆ ಲಂಚ ಪಡೆದರೇ ಅಂಥವರನ್ನು ಜೈಲಿಗೆ ಕಳುಹಿಸಿಯೇ ಸಿದ್ದ ಎಂದು ಶಾಸಕ ಅಶೋಕ್ ಕುಮಾರ್ ರೈ ಎಚ್ಚರಿಕೆ ನೀಡಿದ್ದಾರೆ.
ಕೆಯ್ಯರು ಗ್ರಾಮದ ಕೆಯ್ಯರು ಜಯಕರ್ನಾಟಕ ಸಭಾ ಭವನದಲ್ಲಿ ಮಂಗಳವಾರ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರದ 11ನೇ ಅಕ್ರಮ ಸಕ್ರಮ ಬೈಠಕ್‌ನಲ್ಲಿ ಅವರು ಹಕ್ಕು ಪತ್ರ ವಿತರಿಸಿ ಮಾತನಾಡಿದರು. ಅಕ್ರಮ ಸಕ್ರಮದ ಕಡತ ವಿಲೇವಾರಿಗೆ ಸಂಬಂಧಿಸಿದಂತೆ ಲಂಚ ಪಡೆಯಬಾರದು ಎಂದು ಎಲ್ಲರಿಗೂ ಸೂಚನೆ ನೀಡಿದ್ದೇನೆ. ಆದರೂ ಕೆಲವು ಕಡೆ ದಲ್ಲಾಳಿಗಳ ಮೂಲಕ ಹಣ ಸಂದಾಯವಾಗುತ್ತಿರುವ ಬಗ್ಗೆ, ಕೆಲವರು ಕದ್ದು ಮುಚ್ಚಿ ಲಂಚ ನೀಡುತ್ತಿರುವ ಕುರಿತು ಮಾಹಿತಿ ಲಭಿಸಿದೆ. ಹಣ ಪಡೆದುಕೊಂಡಿರುವುದು ಸಾಬೀತಾದರೆ ಅಂಥವರನ್ನು ಜೈಲಿಗೆ ಕಳುಹಿಸಿಯೇ ಸಿದ್ದ’ ಎಂದು ಶಾಸಕ ಅಶೋಕ್‌ಕುಮಾರ್ ರೈ ಎಚ್ಚರಿಸಿದರು.

ಚುನಾವಣಾ ಪೂರ್ವದಲ್ಲಿ ನೀಡಿದ ಮಾತಿನಂತೆ ನಾನು ನಡೆದುಕೊಂಡಿದ್ದೇನೆ. ನಾಲ್ಕು ಗೋಡೆಗಳ ನಡುವೆ ನಡೆಯುತ್ತಿದ್ದ ಅಕ್ರಮ ಸಕ್ರಮ ಬೈಠಕ್ ಈಗ ಗ್ರಾಮಸ್ಥರ ಮನೆ ಬಾಗಿಲಿನಲ್ಲಿ ನಡೆಯುತ್ತಿದೆ. ಯಾವುದೇ ಪಕ್ಷ-ಭೇದವಿಲ್ಲದೆ ಎಲ್ಲರ ಕಡತವನ್ನು ವಿಲೇವಾರಿ ಮಾಡುತ್ತಿದ್ದೇನೆ. ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರು, ಬೂತ್ ಪದಾಧಿಕಾರಿಗಳು, ಕಾರ್ಯಕರ್ತರು, ಮುಖಂಡರು ಬಂದು ತಮ್ಮ ಅಕ್ರಮ ಸಕ್ರಮವನ್ನು ಮಾಡಿಕೊಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ, ಯಾರೂ ಮನವಿ ಮಾಡುವ ಅಗತ್ಯವಿಲ್ಲ. ಕಾನೂನಾತ್ಮಕವಾಗಿ ಸರಿ ಇರುವ ಎಲ್ಲರ ಕಡತಗಳನ್ನು ವಿಲೇವಾರಿ ಮಾಡಿಕೊಡುತ್ತೇನೆ’ ಎಂದು ಅವರು ಹೇಳಿದರು.