LATEST NEWS
ಪಿಲಾರು ರಾಜಕಾಲುವೆಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಸೋಮೇಶ್ವರ ಹೊಳೆಯಲ್ಲಿ ಪತ್ತೆ

ಉಳ್ಳಾಲ ಜುಲೈ 18: ರಾಜಕಾಲುವೆ ದಾಟುವ ಸಂದರ್ಭದಲ್ಲಿ ಕಾಲುಸಂಕದಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ಕೂಲಿಕಾರ್ಮಿಕರೊಬ್ಬರ ಮೃತದೇಹ ಶುಕ್ರವಾರ ಸೋಮೇಶ್ವರ ಉಚ್ಚಿಲದ ಹೊಳೆಯಲ್ಲಿ ಪತ್ತೆಯಾಗಿದೆ.
ಮೃತರನ್ನು ಸೋಮೇಶ್ವರ ಗ್ರಾಮದ ಕುಂಪಲ ಆಶ್ರಯ ಕಾಲೊನಿಯ ಕೇಶವ ಶೆಟ್ಟಿ (64) ಎಂದು ಗುರುತಿಸಲಾಗಿದೆ.
ಬುಧವಾರ ಸಂಜೆ 7 ಗಂಟೆಯ ಸುಮಾರು ನಿರಂತರ ಮಳೆ ಸುರಿಯುತ್ತಿತ್ತು. ಕೇಶವ ಅವರು ಮನೆಯ ಕಡೆಗೆ ತೆರಳುತ್ತಿದ್ದರು. ಈ ವೇಳೆ ಉಕ್ಕಿ ಹರಿಯುತ್ತಿದ್ದ ಪಿಲಾರುವಿನ ರಾಜಕಾಲುವೆಯ ಕಾಲುಸಂಕ ದಾಟುತ್ತಿದ್ದ ವೇಳೆ ನೀರುಪಾಲಾಗಿದ್ದರು. ಮನೆ ಮಂದಿ, ನೆರೆಹೊರೆಯವರು ಸೇರಿ ಕಾಲುವೆಯುದ್ದಕ್ಕೂ ಸಾಕಷ್ಟು ಹುಡುಕಾಟ ನಡೆಸಿದ್ದರೂ ಕೇಶವ ಅವರು ಸಿಕ್ಕಿರಲಿಲ್ಲ. ಕೇಶವ ಅವರ ಕೊಡೆ ಕಾಲುವೆಯಲ್ಲಿ ಪತ್ತೆಯಾಗಿತ್ತು. ಮನೆ ಮಂದಿ ಗುರುವಾರ ಉಳ್ಳಾಲ ಠಾಣೆಯಲ್ಲಿ ಕೇಶವ ಅವರು ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು. ಶುಕ್ರವಾರ ಮಧ್ಯಾಹ್ನ ಮೃತ ದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
