LATEST NEWS
ನಾಪತ್ತೆಯಾಗಿದ್ದ ಮಹಿಳಾ ಕ್ರಿಕೆಟರ್ ಕಾಡಿನಲ್ಲಿ ಶವವಾಗಿ ಪತ್ತೆ
ಕಟಕ್, ಜನವರಿ 14: ಒಡಿಶಾದ ಮಹಿಳಾ ಕ್ರಿಕೆಟರ್ ರಾಜಶ್ರೀ ಸ್ವೈನ್ ಶುಕ್ರವಾರ ಕಟಕ್ ಹೊರವಲಯದ ದಟ್ಟ ಅರಣ್ಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 11 ರಿಂದ ರಾಜಶ್ರೀ ನಾಪತ್ತೆಯಾಗಿದ್ದರು. ಅಥಗಢ ಪ್ರದೇಶದ ಗುರುಡಿಜಾಟಿಯಾ ಅರಣ್ಯದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಕಟಕ್ ಪೊಲೀಸ್ ಉಪ ಆಯುಕ್ತ ಪಿನಾಕ್ ಮಿಶ್ರಾ ತಿಳಿಸಿದ್ದಾರೆ. ರಾಜಶ್ರೀ ನಾಪತ್ತೆಯಾಗಿರುವ ಬಗ್ಗೆ ಅವರ ಕೋಚ್ ಗುರುವಾರ ಕಟಕ್‌ನ ಮಂಗಳಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕ್ರಿಕೆಟರ್ ಸಾವಿನ ಬಗ್ಗೆ ಗುರುಡಿಜಾಟಿಯಾ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ. ರಾಜಶ್ರೀ ಸಾವಿನ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಆದರೆ, ಆಕೆಯ ದೇಹದ ಮೇಲಿನ ಗಾಯದ ಗುರುತುಗಳು ಮತ್ತು ಕಣ್ಣುಗಳಿಗೆ ಹಾನಿಯಾಗಿರುವುದನ್ನು ಗಮನಿಸಿರುವ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ.
ಆಕೆಯ ಸ್ಕೂಟರ್ ಕಾಡಿನ ಬಳಿ ಅನಾಥವಾಗಿ ಪತ್ತೆಯಾಗಿದೆ. ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು ಎನ್ನಲಾಗಿದೆ. ಈ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಾಜಶ್ರೀ ಸ್ವೈನ್ ಸೇರಿದಂತೆ ಸುಮಾರು 25 ಮಹಿಳಾ ಕ್ರಿಕೆಟ್ ಕ್ರಿಕೆಟರ್‌ಗಳು ಪುದುಚೇರಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಾಗಿ ಬಜ್ರಕಬಾಟಿ ಪ್ರದೇಶದಲ್ಲಿ ಒಡಿಶಾ ಕ್ರಿಕೆಟ್ ಸಂಸ್ಥೆ (ಒಸಿಎ) ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಎಲ್ಲರೂ ಬಜ್ರಕಬಾಟಿಯ ಹೋಟೆಲ್‌ನಲ್ಲಿ ತಂಗಿದ್ದರು ಎಂದು ಮಾಹಿತಿ ಲಭ್ಯವಾಗಿದೆ.
ಒಡಿಶಾ ರಾಜ್ಯ ಮಹಿಳಾ ಕ್ರಿಕೆಟ್ ತಂಡವನ್ನು ಜನವರಿ 10 ರಂದು ಘೋಷಿಸಲಾಗಿತ್ತು. ಆದರೆ ರಾಜಶ್ರೀ ಅವರು ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ. ಮರುದಿನ ಆಟಗಾರರು ಅಭ್ಯಾಸಕ್ಕಾಗಿ ಮೈದಾನಕ್ಕೆ ತೆರಳಿದ್ದರು. ಅಭ್ಯಾಸಕ್ಕೆ ತಪ್ಪಿಸಿಕೊಂಡಿದ್ದ ರಾಜಶ್ರೀ ತನ್ನ ತಂದೆಯನ್ನು ಭೇಟಿಯಾಗಿ ಬರುವುದಾಗಿ ಪುರಿಗೆ ತೆರಳಿದ್ದರು ಎಂದು ಕೋಚ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.