DAKSHINA KANNADA
ಸುರತ್ಕಲ್ ಮುಕ್ಕ ಸರ್ವಿಸ್ ರಸ್ತೆಯಲ್ಲಿ ಸತ್ತ ಕುರಿಗಳನ್ನು ಎಸೆದು ಹೋದ ದುಷ್ಕರ್ಮಿಗಳು..!
ಸುರತ್ಕಲ್ : ಮಂಗಳೂರು ಹೊರವಲಯದ ಸುರತ್ಕಲ್ ಮುಕ್ಕ ಭಾಗದಲ್ಲಿ ಹಳೇಯ ಟೋಲ್‌ಗೇಟ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಯಾವುದೋ ದುಷ್ಕರ್ಮಿಗಳು ಕುರಿಗಳ ಮೃತದೇಹಗಳನ್ನು ರಸ್ತೆ ಬದಿ ಎಸೆದು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ನಗರಪಾಲಿಕೆಯ ಕಾರ್ಮಿಕರ ಸಹಾಯದಿಂದ ಸ್ಥಳೀಯ ಪಾಲಿಕೆ ಸದಸ್ಯರಾದ ಶ್ವೇತಾ ಪೂಜಾರಿ ಅವರು ಇವುಗಳನ್ನು ಬೇರೆಡೆ ಸ್ಥಳಾಂತರಿಸಿ ಮಣ್ಣು ಮಾಡುವ ಮೂಲಕ ಪರಿಸರ ಹಾಗೂ ಜನರ ಆರೋಗ್ಯ ಉಳಿಸುವ ಕೆಲಸ ಮಾಡಿದ್ದಾರೆ. ಈ ಪ್ರದೇಶದಲ್ಲಿ ಈ ಹಿಂದೆ ಕೂಡ ವಧೆ ಮಾಡಿದ ಪ್ರಾಣಿಗಳ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಬಿಸಾಡಿ ಹೋಗುತ್ತಿದ್ದರು ಆದ್ರೆ ಈಗ ಸತ್ತ ಪ್ರಾಣಿಗಳನ್ನುಕೂಡ ರಸ್ತೆ ಬದಿ ಬಿಸಾಡಿ ಹೋಗುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಮಳೆಗಾಲದಲ್ಲಿ ವ್ಯಾಪಕವಾಗಿ ಹರಡುತ್ತಿರುವ ರೋಗಗಳ ಅರಿವು ಇದ್ರೂ ಅನಾಗರಿಕತೆ ತೋರಿಸುತ್ತಿರುವವರ ವಿರುದ್ದ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕೂಡಲೇ ಈ ಬಗ್ಗೆ ತನಿಖೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇಂಥ ಕೃತ್ಯ ಮಾಡುವ ದುಷ್ಕರ್ಮಿಗಳ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ, ತಾಜ್ಯ ಬಿಸಾಡಿ ಹೋಗುವ ಅನಾಗಿಕತೆ ಮಂಗಳೂರಿನಲ್ಲಿ ಇದೀಗ ಹೆಚ್ಚಾಗುತ್ತಿದ್ದು ಈ ಬಗ್ಗೆ ಸಾರ್ವಜನಿಕರು ಸಾಕ್ಷಿ ಸಮೇತ ದೂರು ಸ್ವೀಕರಿಸಲು ಸೂಕ್ತ ಡಿಜಿಟಲ್ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದ್ದಾರೆ.