ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಮುರಿಯಾಳ ಮನೆ ನಿವಾಸಿ ಅಬ್ದುಲ್ ಖಾದರ್ ಎಂಬವರ ಮಗ ಸಂಶು ಯಾನೆ ಸಂಶುದ್ದೀನ್ (38) ಬಂಧಿತ ಆರೋಪಿ. ಪುತ್ತೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಸಂತ್ರಸ್ಥ ಯುವಕ ಅಗಸ್ಟ್ 31 ರಂದು ಬೆಳ್ತಂಗಡಿ ತಾಲೂಕಿನ ಕರಾಯದ ಮಸೀದಿ ಬಳಿ ತನ್ನ ಬೈಕ್ ನಿಲ್ಲಿಸಿ ತನ್ನ ಗೆಳತಿಯ ಮನೆಗೆ ಹೋಗಿದ್ದರು. ನಸುಕಿನ ವೇಳೆ ತನ್ನ ಮನೆಗೆ ಹಿಂದಿರುಗುವ ಸಲುವಾಗಿ ಬೈಕಿನ ಬಳಿಗೆ ಬಂದಾಗ, ಸಂಶುದ್ದೀನ್ ಮತ್ತಾತನ ಸಂಗಡಿಗ ವಿಡಿಯೋ ಚಿತ್ರೀಕರಣ ಮಾಡುತ್ತಾ ಬಂದು, ತನ್ನನ್ನು ಕೈಯಲ್ಲಿ ಹಿಡಿದುಕೊಂಡು ಸಮೀಪದ ಅಂಗಡಿಯ ಬಳಿಗೆ ಕರೆದೊಯ್ದು, ನೀನು ಯಾರು ? ಯಾಕೆ ಇಲ್ಲಿಗೆ ಬಂದದ್ದು, ? ದರೋಡೆ ಮಾಡಲು ಬಂದಿದ್ದಾ ? ಇಲ್ಲಿ ಮೊದಲು ಆಗಿದ್ದ ದರೋಡೆಯನ್ನು ನೀನೇ ಮಾಡಿದ್ದಾ ? ಎಂದೆಲ್ಲಾ ಪ್ರಶ್ನಿಸಿದ್ದಾರೆ. ತಾನು ದರೋಡೆಗೆ ಬಂದವನಲ್ಲ ಎಂದು ತಿಳಿಸಿದರೂ ಕೇಳದೆ, ನಾವು ಜನ ಮಾಡಿ ನಿನಗೆ ಹೊಡೆಯುತ್ತೇವೆ. ದರೋಡೆ ಮಾಡಲು ಯತ್ನಿಸಿದ್ದಾಗಿ ಪೊಲೀಸ್ ಇಲಾಖೆಗೆ ದೂರು ನೀಡುತ್ತೇವೆ ಎಂದೆಲ್ಲಾ ಬೆದರಿಸಿದ್ದಾರೆ. ನೀನು 2 ಲಕ್ಷ ಹಣ ಕೊಟ್ಟರೆ, ನಿನ್ನ ಮೇಲೆ ಕೇಸು ಇಲ್ಲದಾಗೆ ಮಾಡುತ್ತೇನೆ ಎಂದು ಹೇಳಿದಾಗ , ಸಂತ್ರಸ್ಥ ಭಯಪಟ್ಟು ಹಣವನ್ನು ನಾಳೆ ಕೊಡುತ್ತೇನೆಂದು ತಿಳಿಸಿರುತ್ತಾರೆ. ಈ ವೇಳೆ ಆರೋಪಿಯು ಯುವಕನ ಕೈಯಲ್ಲಿದ್ದ ಬೈಕ್ ಕೀಯನ್ನು ಪಡೆದು ಹಣ ಕೊಟ್ಟ ಬಳಿಕ ಬೈಕ್ ಅನ್ನು ತೆಗೆದುಕೊಂಡು ಹೋಗೆಂದು ತಾಕೀತು ಮಾಡಿದ್ದಾರೆ.ಪೊಲೀಸರಿಗೆ ದೂರು ನೀಡಲು ಹೋದರೆ ನಿನ್ನ ಮೇಲೆ ಬೇರೆಯೇ ಕೇಸು ದಾಖಲಿಸಿ ಒಳಗೆ ಹಾಕಿಸುತ್ತೇವೆ ಎಂದು ಯುವಕನಿಗೆ ಬೆದರಿಕೆಯೊಡ್ಡಿದ್ದಾನೆ. ಬಳಿಕ ಹಣವನ್ನು ಪಾವತಿಸಲು ನೆರವಾಗುವ ಸಲುವಾಗಿ ಆರೋಪಿಯು ತನ್ನ ಮೊಬೈಲ್ ನಂಬ್ರವನ್ನು ಯುವಕನಿಗೆ ನೀಡಿದ್ದು, ಬೆದರಿಕೆಗೆ ಮಣಿದ ಸಂತ್ರಸ್ಥ ಯುವಕ ಆರೋಪಿಯು ನೀಡಿದ ಸ್ಕ್ಯಾನರ್ ಗೆ 2000 ರೂ. ಹಾಗೂ 23,000 ರೂ. ದಂತೆ ಒಟ್ಟು 25 ಸಾವಿರ ರೂಪಾಯಿ ಹಣವನ್ನು ಜಮಾ ಮಾಡಿದ್ದರು. ಉಳಿಕೆ ಮೊತ್ತವಾದ 1,75,000ರೂ. ವನ್ನು ಮುಂದಿನ 5 ದಿನಗಳಾವಧಿಯಲ್ಲಿ ಪಾವತಿಸಬೇಕು ಹಾಗೂ ಬೈಕ್ ದಾಖಲೆಗಳನ್ನು ಒದಗಿಸಬೇಕೆಂದು ಹೆಚ್ಚುವರಿ ಬೇಡಿಕೆ ಇಟ್ಟಾಗ , ಕಂಗೆಟ್ಟ ಯುವಕ ಗೆಳೆಯರೊಡನೆ ಚರ್ಚಿಸಿ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.