KARNATAKA
ಗೋಕಳ್ಳರಿಗೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸುತ್ತೇವೆ – ಸಚಿವ ಮಂಕಾಳ ವೈದ್ಯ ವಾರ್ನಿಂಗ್
ಕಾರವಾರ ಫೆಬ್ರವರಿ 04: ರಾಜ್ಯದಲ್ಲಿ ಗೋಕಳ್ಳತನ ಹಾಗೂ ಗೋವುಗಳ ಮೇಲೆ ನಡೆಯುತ್ತಿರುವ ಹೇಯ ಕೃತ್ಯಗಳ ವಿರುದ್ದ ಸಚಿವ ಮಂಕಾಳ್ ವೈದ್ಯ ಗರಂ ಆಗಿದ್ದು , ಗೋಕಳ್ಳರ ಮೇಲೆ ನಡು ರಸ್ತೆಯಲ್ಲೇ ಗುಂಡು ಹಾರಿಸುತ್ತೇವೆ ಎಂದು ಎಚ್ಚರಿಸಿದ್ದಾರೆ,
ಕಾರವಾರದಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಆಕಳು ಕಳ್ಳರ ವಿರುದ್ಧ ಕಿಡಿಕಾರಿದರು. ನಾವು ಹಸುವನ್ನು ಪೂಜ್ಯನೀಯ ಭಾವನೆಯಿಂದ ಕಾಣುತ್ತೇವೆ. ನಾವು ಅವುಗಳನ್ನು ಬಹಳ ಪ್ರೀತಿಯಿಂದ ಕಾಣುತ್ತೇವೆ. ಅಂತಹ ಹಸುವಿನ ಮೇಲೆ ದೌರ್ಜ್ಯನ್ಯ ನಡೆಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿ ಅವರು ಯಾರೇ ಆಗಲಿ ಕ್ರಮ ಕೈಗೊಳ್ಳಲಿ. ಇನ್ನೂ ಹೆಚ್ಚಾಗಿ ಹೇಳಬೇಕು ಅಂದ್ರೆ ಗೋ ಕಳ್ಳರ ವಿರುದ್ಧ ಅಥವಾ ಗೋವಿನ ಮೇಲೆ ದೌರ್ಜನ್ಯ ನಡೆಸುವವರನ್ನು ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಉತ್ತರಕನ್ನಡ ಜಿಲ್ಲೆಯ ಗೋ ಕಳ್ಳತನ ಹಲವು ವರ್ಷಗಳಿಂದ ನಡೆಯುತ್ತಿದೆ. ಗೋ ಕಳ್ಳತನ ಪ್ರಕರಣದಲ್ಲಿ ಪೊಲೀಸ್ ಇಲಾಖೆಯಿಂದ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ. ಗೋ ಕಳ್ಳತನ ಪ್ರಕರಣದಲ್ಲಿ ಹಲವು ಆರೋಪಿಗಳನ್ನ ಬಂಧಿಸಲಾಗಿದೆ. ಮುಂದೆಯೂ ಪೊಲೀಸ್ ಇಲಾಖೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರೆ ನೀಡಿದರು.
ಗೋ ಕಳ್ಳರಿಗೆ ನಡುರಸ್ತೆಯಲ್ಲೇ ಗುಂಡೇಟು ಕೊಡಲು ಆದೇಶಿಸುವೆ ಎಂದು ಸಚಿವ ಮಂಕಾಳ ವೈದ್ಯ ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಗೋ ಕಳ್ಳತನ ಪ್ರಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ. ಗೋಕಳ್ಳರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಆದೇಶ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಚಿವರ ಹೇಳಿಕೆ ಪರ ಹಾಗೂ ವಿರುದ್ಧವಾದ ಆಯಾಮದಲ್ಲಿ ಚರ್ಚೆ ನಡೆಯುತ್ತಿದೆ.