DAKSHINA KANNADA
ಸಮಸ್ಯೆ ಕೇಳಲು ಹೊರಟ ಸಚಿವರಿಗೇ ಬಂದೊದಗಿದ ಸಮಸ್ಯೆ…..ವೈರಲ್ ಆದ ವಿಡಿಯೋ…!!
ಸುಳ್ಯ ಅಗಸ್ಟ್ 09: ಗ್ರಾಮದ ಜನರ ಭೇಟಿಗೆ ಹೊರಟ ರಾಜ್ಯದ ಮೀನುಗಾರಿಕಾ ಮತ್ತು ಬಂದರು ಸಚಿವ ಎಸ್.ಅಂಗಾರ ಅವರಿಗೆ ಗ್ರಾಮೀಣ ಪ್ರದೇಶಗಳ ರಸ್ತೆಗಳ ಅವ್ಯವಸ್ಥೆಯ ದರ್ಶನವಾದ ಘಟನೆ ನಡೆದಿದ್ದು, ಈ ಸಂದರ್ಭ ತೆಗೆದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಕುಗ್ರಾಮಗಳನ್ನೇ ಹೆಚ್ಚು ಹೊಂದಿರುವ ಸುಳ್ಯದ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಅಂಗಾರ ಸಚಿವರಾಗಿ ಆಯ್ಕೆಯಾದ ಬಳಿಕ ತಮ್ಮ ಕ್ಷೇತ್ರದ ಗ್ರಾಮ ಗ್ರಾಮಗಳಿಗೆ ಭೇಟಿ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದೇ ರೀತಿ ಸುಳ್ಯದ ಆಲೆಟ್ಟಿಯಿಂದ ಕೂಟೇಲು ಗ್ರಾಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಗ್ರಾಮವನ್ನು ಸಂಪರ್ಕಿಸುವ ರಸ್ತೆ ಭಾರೀ ಮಳೆಯಿಂದಾಗಿ ಸಂಪೂರ್ಣ ಹೆದಗೆಟ್ಟಿತ್ತು. ಇದರಿಂದಾಗಿ ತಮ್ಮ ಕಾರನ್ನು ಬಿಟ್ಟು ಸಚಿವರು ಜೀಪ್ ಮೂಲಕ ಕೂಟೇಲು ಗ್ರಾಮಕ್ಕೆ ಹೊರಟಿದ್ದರು.
ಆದರೆ ಮಳೆಯಿಂದಾಗಿ ಕೆಸರುಮಯವಾಗಿದ್ದ ರಸ್ತೆಯಲ್ಲಿ ಸಚಿವರಿದ್ದ ಜೀಪ್ ಕೂಡಾ ಹೋಗಲಾಗದೆ, ಸಚಿವರು ಕಾಲ್ನಡಿಗೆಯಲ್ಲೇ ಗ್ರಾಮದ ಜನರನ್ನು ಭೇಟಿ ಮಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿತ್ತು. ಈ ರಸ್ತೆಯ ಸುಮಾರು ಒಂದು ಕಿಲೋಮೀಟರ್ ರಸ್ತೆ ಇದೇ ರೀತಿ ಹದಗೆಟ್ಟಿದ್ದು, ಇಲ್ಲಿ ರಸ್ತೆ ನಿರ್ಮಿಸಲು ಶಾಸಕ ಅಂಗಾರ ಈಗಾಗಲೇ ಅನುದಾನವನ್ನು ಬಿಡುಗಡೆಮಾಡಿದ್ದು, ಒಂದು ಕಿಲೋಮೀಟರ್ ರಸ್ತೆ ಕಾಮಗಾರಿ ಮಳೆಯ ಕಾರಣಕ್ಕಾಗಿ ನಿಂತಿತ್ತು. ಆದರೆ ಇದೇ ಒಂದು ಕಿಲೋಮೀಟರ್ ರಸ್ತೆಯಲ್ಲಿ ಸಚಿವ ಅಂಗಾರರ ಜೀಪ್ ಸಂಚರಿಸಲಾಗದ ಕಾರಣ ಸಚಿವರು ಜೀಪ್ ನಿಂದ ಇಳಿದು ಕಾಲ್ನಡಿಗೆಯಲ್ಲಿ ಸಾಗಿದ್ದರು. ಈ ಸಂದರ್ಭದಲ್ಲಿ ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಿಸಲಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಗ್ರಾಮೀಣ ಭಾಗದ ರಸ್ತೆಯ ನರಕ ಸದೃಶ್ಯ ರಸ್ತೆಯ ಸ್ಥಿತಿ ಸಚಿವರಿಗೆ ಪ್ರತ್ಯಕ್ಷ ದರ್ಶನವಾಯಿತು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಲ್ಲಿ ತಾಲೂಕು ಹಿಂದೆ ಬಿದ್ದಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಪ್ಯಾಕೇಜ್ ಘೋಷಣೆ ಮಾಡಿಸಲು ಸಚಿವರು ಪ್ರಯತ್ನ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.