Connect with us

    DAKSHINA KANNADA

    ಕೃಷಿ ಚಟುವಟಿಕೆಗೆ ಮಿನಿ ಟಿಪ್ಪರ್ ಸಿದ್ಧಪಡಿಸಿದ ಹಳ್ಳಿ ಯುವಕ.

    ಪುತ್ತೂರು : ಕೃಷಿ ಚಟುವಟಿಕೆಗಳಿಗೆ ಉಪಯೋಗಿಸುವಂತಹ ಸಣ್ಣ ಟಿಪ್ಪರ್ ಒಂದನ್ನು ದಕ್ಷಿಣಕನ್ನಡದ ಹಳ್ಳಿಯ ಯುವಕನೊಬ್ಬ ತಯಾರಿಸಿ ಗಮನ ಸೆಳೆದಿದ್ದಾನೆ. ಕಡಬ ತಾಲೂಕಿನ ಸವಣೂರಿನ ಬಂಬಿಲ ನಿವಾಸಿ ಪುರುಷೋತ್ತಮ್ ಈ ಸಣ್ಣ ಟಿಪ್ಪರ್ ನ ಆವಿಷ್ಕಾರ ಮಾಡಿದ್ದು, ಸ್ಕೂಟರ್ ಒಂದನ್ನು ಮಾರ್ಪಾಡು ಮಾಡಿ ಈ ಟಿಪ್ಪರ್ ಸಿದ್ಧ ಮಾಡಲಾಗಿದೆ. ತೋಟದ ಮಧ್ಯೆ ಕಿತ್ತ ಕಳೆಗಳನ್ನು ಸ್ಥಳಾಂತರಿಸಲು, ತೋಟಕ್ಕೆ ಮಣ್ಣು ಹಾಕಲು, ಅಡಿಕೆ ಲೋಡ್ ಮಾಡಲು ಹೀಗೆ ವಿವಿಧ ಕೆಲಸಗಳಿಗೆ ಈ ಟಿಪ್ಪರ್ ಅನ್ನು ಬಳಸಬಹುದಾಗಿದೆ.

    ಗಿಡ ಹಾಗೂ ಇತರ ಬೆಳೆಗಳಿರುವ ತೋಟದ ಮಧ್ಯೆ ಲಾರಿಗಳು ಸಂಚರಿಸುವುದು ಸಾಧ್ಯವಿಲ್ಲದ ಕಾರಣ ಈ ಟಿಪ್ಪರ್ ಲಾರಿಯ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲಿದೆ ಎನ್ನುವುದು ಮಿನಿ ಟಿಪ್ಪರ್ ಸಿದ್ಧಗೊಳಿಸಿದ ಪುರುಷೋತ್ತಮ್ ಅಭಿಪ್ರಾಯ.

    130 ಸಿಸಿ ಇಂಜಿನ್ ಹೊಂದಿರುವ ಸ್ಕೂಟರ್ ಅನ್ನು ತನಗೆ ಬೇಕಾದ ರೀತಿಯಲ್ಲಿ ಮಾರ್ಪಾಡು ಮಾಡಿಕೊಂಡಿರುವ ಇವರು ಸ್ಕೂಟರ್ ಗೆ ಹಲವು ಎಕ್ಸ್ಟ್ರಾ ಫಿಟ್ಟಿಂಗ್ ಕೂಡಾ ಮಾಡಿಕೊಂಡಿದ್ದಾರೆ. ಟಿಪ್ಪರ್ ಹಿಂದೆ ಮುಂದೆ ಸಲೀಸಾಗಿ ಸಾಗುವಂತೆ ಮಾಡಲು ಗೇರ್ ಬಾಕ್ಸ್ ಅಳವಡಿಸಲಾಗಿದೆ. ಅಲ್ಲದೆ ಇದಕ್ಕೆ ರಿವರ್ಸ್ ಗೇರ್ ಅನ್ನೂ ಫಿಟ್ ಮಾಡಲಾಗಿದ್ದ, 3 ಫೀಟ್ ಅಗಲದ ಬಾಡಿಯನ್ನೂ ನಿರ್ಮಿಸಲಾಗಿದ್ದು , ಎರಡು ಕ್ವಿಂಟಾಲ್ ತೂಕ ಹೊರುವ ಸಾಮರ್ಥ್ಯವನ್ನೂ ಹೊಂದಿದೆ.

    ಕಡಬ ತಾಲೂಕಿನ ಸವಣೂರಿನ ಬಂಬಿಲ ನಿವಾಸಿಗಳಾದ ಬಾಲು ಶೆಟ್ಟಿ ಹಾಗೂ ಯಮುನಾ ಪುರುಷೋತ್ತಮ್ ನ ಈ ಪ್ರಯತ್ನಕ್ಕೆ ನಿರಂತರ ಪ್ರೋತ್ಸಾಹವನ್ನೂ ನೀಡಿದ್ದಾರೆ. ನಿಂತಿಕಲ್ಲು ಐಟಿಐ ನಲ್ಲಿ ಕಲಿತಿರುವ ಪುರುಷೋತ್ತಮ್ ಇದೀಗ ಸದ್ಯಕ್ಕೆ ಉಜಿರೆಯ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಜೆಕ್ಟ್ ವರ್ಕ್ ಮಾಡಿಕೊಂಡಿದ್ದಾರೆ.

    50 ಸಾವಿರ ರೂಪಾಯಿ ವೆಚ್ಚದಲ್ಲಿ ಈ ಟಿಪ್ಪರ್ ಸಿದ್ಧಗೊಂಡಿದ್ದು, ಸಣ್ಣ ಕೃಷಿಕರೂ ಕೂಡಾ ಇದನ್ನು ತಮ್ಮ ಕೃಷಿ ತೋಟದಲ್ಲಿ ಬಳಸಿಕೊಳ್ಳಬಹುದಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ಕಿಲ್ ಇಂಡಿಯಾ ಹಾಗೂ ಆತ್ಮನಿರ್ಭರ್ ಕರೆಗೆ ಹಳ್ಳಿಗಳಲ್ಲೂ ಇದೀಗ ಸ್ಪಂದನೆ ದೊರೆಯಲಾರಂಭಿಸಿದೆ. ಯುವಕರು ಈ ರೀತಿಯ ಪ್ರಯೋಗಗಳನ್ನು ಮಾಡುವ ಮೂಲಕ ದೇಶದಲ್ಲಿ ಹೊಸ ಬದಲಾವಣೆಗಳನ್ನು ತರುವತ್ತ ಪ್ರಯತ್ನಿಸಬೇಕು ಎಂದು ಯುವಕನ ಈ ಸಾಧನೆಯ ಬಗ್ಗೆ ಸುಳ್ಯ ಶಾಸಕ ಅಂಗಾರ ಪ್ರತಿಕ್ರಿಯಿಸಿದ್ದಾರೆ.

    Video:

    Share Information
    Advertisement
    Click to comment

    You must be logged in to post a comment Login

    Leave a Reply