DAKSHINA KANNADA
ತಿರುಪತಿ ಸಮೀಪ ನಡೆದ ಅಪಘಾತದಲ್ಲಿ ಬಿಳಿನೆಲೆ ಕೈಕಂಬದ ಮಹಿಳೆಯೊಬ್ಬರು ಸಾವು

ಪುತ್ತೂರು ಮೇ 15: : ತಿರುಪತಿ ಯಾತ್ರೆಗೆ ತೆರಳಿದ್ದ ಟಿಟಿ ವಾಹನ ಅಪಘಾತಕ್ಕೀಡಾಗಿ ಬಿಳಿನೆಲೆ ಕೈಕಂಬದ ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ತಿರುಪತಿ-ಶ್ರೀ ಕಾಳಹಸ್ತಿ ಹೆದ್ದಾರಿಯಲ್ಲಿ ಬುಧವಾರ ಬೆಳಿಗ್ಗೆ ಘಟನೆ ಸಂಭವಿಸಿದೆ. ಮೃತರನ್ನು ಶೇಷಮ್ಮ (70) ಎಂದು ಗುರುತಿಸಲಾಗಿದೆ.
ಕಡಬ ತಾಲ್ಲೂಕು ಬಿಳಿನೆಲೆ ಗ್ರಾಮದ ಕೈಕಂಬದ ಕುಟುಂಬ ಹಾಗೂ ಅವರ ಸಂಬಂಧಿಕರು ಪ್ಯಾಕೇಜ್ ಟೂರ್ ಯೋಜನೆಯಡಿ ಟಿಟಿಯಲ್ಲಿ ತಿರುಪತಿ ಯಾತ್ರೆ ಕೈಗೊಂಡಿದ್ದರು. ಒಟ್ಟು ಮೂರು ವಾಹನಗಳಲ್ಲಿ ಕರ್ನಾಟಕದ ಇತರ ಭಾಗದವರೂ ವಾಹನದಲ್ಲಿದ್ದರು.

ಮಂಗಳವಾರ ಗುಂಡ್ಯದಿಂದ ವಾಹನ ಹೊರಟಿತ್ತು. ಬುಧವಾರ ಸಂಜೆ ತಿರುಪತಿಯಲ್ಲಿ ದರ್ಶನ ನೆರವೇರಿಸುವುದಕ್ಕೂ ಮೊದಲು ಶ್ರೀಕಾಳಹಸ್ತಿಗೆ ಕರ್ನಾಟಕದ ತಂಡ ಹೊರಟಿತ್ತು. ಕೈಕಂಬದವರು ಇದ್ದ ವಾಹನ ಮೇಲ್ವೇತುವೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಬಡಿದು ಪಲ್ಟಿಯಾಗಿದೆ. ತೀವ್ರ ಗಾಯಗೊಂಡಿದ್ದ ಕೂಸಪ್ಪ ಅವರ ಪತ್ನಿ ಶೇಷಮ್ಮ (70) ಮೃತರಾಗಿದ್ದಾರೆ. ಕೈಕಂಬದ ತಿಲೇಶ್ (45), ಕಮಲಾಕ್ಷಿ (60) ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.