LATEST NEWS
ಮಂಗಳೂರಿನ ರಸ್ತೆಯ ದುರಾವಸ್ಥೆಯನ್ನು ಅಣುಕಿಸಿದ ಮಿಲ್ಕ್ ಶೇಕ್ ಚಾಲೆಂಜ್ ವಿಡಿಯೋ

ಮಂಗಳೂರಿನ ರಸ್ತೆಯ ದುರಾವಸ್ಥೆಯನ್ನು ಅಣುಕಿಸಿದ ಮಿಲ್ಕ್ ಶೇಕ್ ಚಾಲೆಂಜ್ ವಿಡಿಯೋ
ಮಂಗಳೂರು ಜುಲೈ 24: ಮಂಗಳೂರು ಎಂದೊಡನೆ ಥಟ್ ಅಂತ ನೆನಪಾಗುವುದು ಸುಂದರ ಬೀಚ್ ಗಳು , ತೆಂಗು ಕಂಗಿನ ದೃಶ್ಯ ಕಾವ್ಯ, ಸುಂದರ ಸಂಪ್ರದಾಯಿಕ ದೇವಾಲಯ, ಚಿತ್ತಾಕರ್ಷಕ ಚರ್ಚ್ ಗಳು , ಆದರೆ ಮಂಗಳೂರಿನ ರಸ್ತೆಗಳ ಬಗ್ಗೆ ಯೋಚಿಸಿದರೆ ನಿದ್ದೆಯಲ್ಲೂ ಬೆಚ್ಚಿ ಬೀಳುವ ಪರಿಸ್ಥಿತಿ ಇದೆ.
ಮಂಗಳೂರಿನ ಕುಳಾಯಿ ಯಿಂದ ಕುಳೂರು ವರೆಗಿನ ರಸ್ತೆ ಎಷ್ಟು ಹದಗೆಟ್ಟಿದೆ ಎಂದರೆ ಅದರ ಮೇಲೆ ವಾಹನ ಓಡಿಸುವುದು ಒಂದು ಸಾಹಸವೇ ಆಗಿದೆ. ಇಲ್ಲಿಯ ರಸ್ತೆ ಮೃತ್ಯು ಕೂಪವಾಗುತ್ತಿದೆ. ಇಲ್ಲಿರುವ ಕುಳೂರಿನ ಸೇತುವೆ ಮೇಲೆ ವಾಹನ ಚಲಾಯಿಸಿದರೆ ನೆಟ್ಟಗಿರುವ ಬೆನ್ನು ಸೊಟ್ಟಗಾಗುವುದಂತು ಖಂಡಿತ. 65 ವರ್ಷ ಹಳೆಯ ಸೇತುವೆ ಮೇಲೆ ರಸ್ತೆಯ ಡಾಮರ್ ಸಂಪೂರ್ಣ ಕಿತ್ತು ಹೋಗಿದೆ.

ಇಲ್ಲಿಯ ಪರಿಸ್ಥಿತಿಯನ್ನು ಅಣಕಿಸುವ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಿಲ್ಕ್ ಶೇಕ್ ಚಾಲೆಂಜ್ #milkshakechallenge ಹಾಗೂ ಎಡ್ಡೆ ರೋಡ್ ಬೋಡು #yedderoadbodu ಎಂದು ಈ ವಿಡಿಯೋಗೆ ಟೈಟಲ್ ನೀಡಲಾಗಿದೆ. ಮಂಗಳೂರಿನ ಯುವಕರ ತಂಡ ಒಂದು ಕಾರಿನಲ್ಲಿ ಮಿಲ್ಕಶೇಕ್ ಮಾಡುವ ಬಗೆಯನ್ನು ತುಂಬಾ ವ್ಯಂಗ್ಯವಾಗಿ ವಿವರಿಸಿದ್ದಾರೆ. ಮಿಲ್ಕ್ ಶೇಕ್ ಮಾಡಲು ತಗಲುವ ಹಾಲು, ಸಕ್ಕರೆ, ನೀರು, ಪ್ಲೇವರ್ ಹಾಕಿ ಶೇಕ್ ಮಾಡದೆ ಕೂಳೂರು ಬ್ರಿಡ್ಜ್ ದಾಟುವುದರ ಒಳಗೆ ಮಿಲ್ಕಶೇಕ್ ರೆಡಿಯಾಗೋ ಬಗೆಯನ್ನು ಯುವಕರ ತಂಡ ತೋರಿಸಿದೆ.
ಈ ರಸ್ತೆಯ ದುರಾವಸ್ಥೆಯನ್ನು ವಿವರಿಸಲು ಯುವಕರ ತಂಡ ಈ ಫನ್ನಿ ವಿಡಿಯೋ ಸಿದ್ದಪಡಿಸಿದ್ದು, ರಸ್ತೆಯ ಪರಿಸ್ಥಿತಿಗೆ ಹಿಡಿದ ಕೈ ಗನ್ನಡಿಯಾಗಿದೆ. ಇದೇ ರೀತಿ ಈ ಹಿಂದೆ ಯುವಕರ ತಂಡ ಒಂದು ನೆನೆಗುದಿಗೆ ಬಿದ್ದಿರುವ ಪಂಪ್ ವೆಲ್ ನ ಓವರ್ ಬ್ರಿಡ್ಜ್ ನ ಹುಟ್ಟು ಹಬ್ಬ ಆಚರಿಸಿತ್ತು. ವ್ಯವಸ್ಥೆಯನ್ನು ಅಣಕಿಸುವ ಯುವಕರ ಈ ಪ್ರಯತ್ನ ಸರಕಾರದ ಕಣ್ಣು ತೆರೆಸಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.