LATEST NEWS
ಪರಿಹಾರದ ಚೆಕ್ ವಿತರಣೆಗೆ ಪಾಲಿಕೆ ವೇಗ ನೀಡಬೇಕು – ಶಾಸಕ ವೇದವ್ಯಾಸ್ ಕಾಮತ್
ಪರಿಹಾರದ ಚೆಕ್ ವಿತರಣೆಗೆ ಪಾಲಿಕೆ ವೇಗ ನೀಡಬೇಕು – ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು ಜೂನ್ 22: ಮಳೆ, ನೆರೆ ಮತ್ತು ಪ್ರಕೃತಿ ವಿಕೋಪದಲ್ಲಿ ಆದ ನಷ್ಟಕ್ಕೆ ಪರಿಹಾರದ ಚೆಕ್ ಸಂತ್ರಸ್ತರಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಮಂಗಳೂರು ಮಹಾನಗರ ಪಾಲಿಕೆಯ ಕಡೆಯಿಂದ ವೇಗ ನೀಡಬೇಕು ಎಂದು ಮಂಗಳೂರು ನಗರ ದಕ್ಷಿಣದ ಶಾಸಕ ಡಿ ವೇದವ್ಯಾಸ ಕಾಮತ್ ಪಾಲಿಕೆ ಆಯುಕ್ತರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗುರುವಾರ ಅವರು ಕಮೀಷನರ್, ಇಂಜಿನಿಯರಿಂಗ್ ಮತ್ತು ಆರೋಗ್ಯ ವಿಭಾಗದ ಅಧಿಕಾರಿಗಳ ಸಭೆ ನಡೆಸಿದರು. ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಡ್ರೈನೇಜ್ ಗೆ ಸಂಬಂಧಪಟ್ಟ ಯಾವ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಮತ್ತು ಯಾವುದು ಅರ್ಧಕ್ಕೆ ನಿಂತಿವೆ ಮತ್ತು ಯಾವ ವಾರ್ಡಿನಲ್ಲಿ ಡ್ರೈನೇಜ್ ನೀರು ತೆರೆದ ಚರಂಡಿಗಳಲ್ಲಿ ಹೋಗುತ್ತಿವೆ ಎನ್ನುವುದರ ಕುರಿತು ಮಾಹಿತಿಯನ್ನು 7 ದಿನಗಳೊಳಗೆ ತಮಗೆ ನೀಡಬೇಕು ಎಂದು ಆದೇಶ ನೀಡಿದರು. ಒಳಚರಂಡಿ ವ್ಯವಸ್ಥೆಯಿಂದ ನೀವು ತೆರೆದ ಚರಂಡಿಗೆ ಕನೆಕ್ಷನ್ ಕೊಟ್ಟಿರುವುದರಿಂದ ವಾತಾವರಣ ಗಬ್ಬುವಾಸನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇದನ್ನು ಪತ್ತೆ ಹಚ್ಚಿ ಚರಂಡಿಗೆ ಬರುವುದನ್ನು ತಡೆಗಟ್ಟಲು ಕೂಡಲೇ ಕ್ರಮಕೈಗೊಳ್ಳಬೇಕು, ಕಲುಷಿತಗೊಂಡಿರುವ ಬಾವಿಗಳನ್ನು ದುರಸ್ತಿಗೊಳಿಸುವುದರ ಬಗ್ಗೆ ಕ್ರಮ ಕೈಗೊಳ್ಳಲು ಆದೇಶ ನೀಡಿದರು.
ಮಂಗಳೂರಿನಲ್ಲಿ ಕಸ ವಿಲೇವಾರಿಯ ಬಗ್ಗೆ ಸಾರ್ವಜನಿಕರಿಗೆ ಆಗುವ ತೊಂದರೆ ಯಾವ ನಿಟ್ಟಿನಲ್ಲಿ ಪರಿಹರಿಸಲು ಸಾಧ್ಯ ಎಂಬ ಬಗ್ಗೆ ಆರೋಗ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ಒಂದು ಮೀಟರ್ ಅಗಲದ ಚರಂಡಿಯಿಂದ ಹೂಳು ತೆಗೆಯುವ ಕಾಂಟ್ರೆಕ್ಟ್ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ನವರಿಗೆ ಇತ್ತು.
ಅವರು ತೆಗೆಯದೇ ಇದ್ದ ಕಾರಣ ಮೊನ್ನೆಯ ಮಳೆಯಲ್ಲಿ ಸಾರ್ವಜನಿಕರಿಗೆ ತುಂಬಾ ಕಷ್ಟನಷ್ಟ ಉಂಟಾಗಿದೆ. ಕೂಡಲೇ ಮೊನ್ನೆ ಬಂದಿರುವ ಪ್ರದೇಶಗಳ ಚರಂಡಿಯಿಂದ ಹೂಳು ತೆಗೆಯಲು ಕಟ್ಟುನಿಟ್ಟಾಗಿ ಕ್ರಮ ಜರುಗಿಸಬೇಕು, ಎಲ್ಲೆಲ್ಲಿ ಹೂಳು ತೆಗೆಯಲಾಗಿದೆ ಎಂಬುದನ್ನು ಫೋಟೋ ಸಹಿತ ಲಾಗ್ ಬುಕ್ ನಲ್ಲಿ ಎಂಟ್ರಿ ಮಾಡಬೇಕು. ಮನೆಮನೆಯಿಂದ ಒಣಕಸ, ಹಸಿಕಸ, ಕೊಟ್ಟರೂ ಕೂಡ ಅದನ್ನು ಒಟ್ಟಾಗಿ ಸೇರಿಸಿ ಒಂದೇ ವಾಹನದಲ್ಲಿ ಗುತ್ತಿಗೆದಾರರು ಕೊಂಡುಹೋಗುವುದನ್ನು ತಡೆಗಟ್ಟಬೇಕು. ನಾಗರಿಕರಲ್ಲಿ ಒಣಕಸ, ಹಸಿಕಸ ಬೇರ್ಪಡಿಸಿ ನೀಡುವ ಬಗ್ಗೆ ಜನಜಾಗೃತಿ ಕೈಗೊಳ್ಳಬೇಕು ಎಂದು ತಿಳಿಸಿದರು.