LATEST NEWS
ಪ್ರಾಕೃತಿಕ ವಿಕೋಪ ನಿರ್ವಹಣೆಗೆ ತುರ್ತು ವೈದ್ಯಕೀಯ ನೆರವು ತಂಡ – ಜಿಲ್ಲಾಧಿಕಾರಿ
ಪ್ರಾಕೃತಿಕ ವಿಕೋಪ ನಿರ್ವಹಣೆಗೆ ತುರ್ತು ವೈದ್ಯಕೀಯ ನೆರವು ತಂಡ – ಜಿಲ್ಲಾಧಿಕಾರಿ
ಉಡುಪಿ, ಆಗಸ್ಟ್ 21 : ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ಪ್ರಾಕೃತಿಕ ವಿಕೋಪಗಳು ಉಂಟಾದಲ್ಲಿ ಆರೋಗ್ಯ ನೆರವು ನೀಡಲು , ತುರ್ತು ವೈದ್ಯಕೀಯ ನೆರವು ತಂಡವನ್ನು ಮುಂಜಾಗ್ರತಾ ಕ್ರಮವಾಗಿ ರಚನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅತಿವೃಷ್ಠಿಯಿಂದ ಸಿಲುಕಿ ಆರೋಗ್ಯ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸುತ್ತಿರುವ ಸಾರ್ವಜನಿರಿಗೆ ತಕ್ಷಣದಲ್ಲಿ ವೈದ್ಯಕೀಯ ನೆರವು ನೀಡುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ , ನುರಿತ ತಜ್ಞರನ್ನು ಒಳಗೊಂಡ ವೈದ್ಯರ , ಅಧಿಕಾರಿಗಳ ಮತ್ತು ಸಹಾಯಕರ ತಂಡವನ್ನು ರಚಿಸಲಾಗಿದ್ದು, ವಿಕೋಪ ಸಂದರ್ಭದಲ್ಲಿ ಪ್ರಾಣ ಹಾನಿ ತಡೆಯಲು ಈ ತಂಡ ನೆರವು ನೀಡಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವಿಕೋಪ ಸಂದರ್ಭದಲ್ಲಿ ಅಗತ್ಯ ಔಷಧಗಳಿಗೆ ಯಾವುದೇ ಕೊರತೆಯಾಗದಂತೆ ಸೂಕ್ತ ದಾಸ್ತಾನು ಮಾಡಿಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಅತಿವೃಷ್ಠಿ ಸಂದರ್ಭದಲ್ಲಿ ನೀರಿನಿಂದ ಬರಬಹುದಾದ ರೋಗಗಳು ಮತ್ತು ಅವುಗಳನ್ನು ತಡೆಯುವ ಕುರಿತಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಜಾಗೃತವಾಗಿರುವಂತೆ ತಿಳಿಸಿದರು.
ನೆರೆ ಪೀಡಿತ ಪ್ರದೇಶದಲ್ಲಿ ನೀರನ್ನು ಚೆನ್ನಾಗಿ ಕುದಿಸಿ ಆರಿಸಿ ಕುಡಿಯಲು ಹಾಗೂ ಹಾಲೋಜಿನ್ ಮಾತ್ರೆಯನ್ನು ಕುಡಿಯುವ ನೀರಿಗೆ ಹಾಕಿ ಬಳಕೆ ಮಾಡುವಂತೆ ವ್ಯಾಪಕ ಅರಿವು ಮೂಡಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಕುಡಿಯುವ ನೀರಿನ ಎಲ್ಲಾ ಮೂಲಗಳಿಗೆ ಸೂಕ್ತ ರೀತಿಯಲ್ಲಿ ಕ್ಲೋರಿನೇಷನ್ ಮಾಡಿಸುವಂತೆ , ಈ ಎಲ್ಲಾ ಮೂಲಗಳ ಸುತ್ತ ನೀರು ನಿಲ್ಲದಂತೆ ಹರಿದುಹೋಗುವ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಹಾಗೂ ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸುವಂತೆ ತಿಳಿಸಿದರು.