LATEST NEWS
ರ‍್ಯಾಗಿಂಗ್ ಪಿಡುಗಿಗೆ ಬಲಿಯಾದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಪ್ರೀತಿ

ತೆಲಂಗಾಣ ಫೆಬ್ರವರಿ 27: ರಾಗಿಂಗ್ ನಿಂದಾಗಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ವೈದ್ಯಕೀಯ ವಿಧ್ಯಾರ್ಥಿನಿ ಧಾರಾವತಿ ಪ್ರೀತಿ ಸಾವನಪ್ಪಿದ್ದಾರೆ.
ಕಾಕತೀಯ ವೈದ್ಯಕೀಯ ಕಾಲೇಜಿನ(ಕೆಎಂಸಿ) ಅನಸ್ತೇಶಿಯಾ ವಿಭಾಗದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದ ಪ್ರೀತಿಗೆ ಕಳೆದ ಮೂರು ತಿಂಗಳಿನಿಂದ ಎರಡನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಎಂಡಿ ಸೈಫ್ ಎಂಬಾತ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದ್ದು, ಈ ಹಿನ್ನಲೆ ಪ್ರೀತಿ ಆತ್ಮಹತ್ಯೆಗೆ ಯತ್ನಿಸಿದ್ದರು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಳು. ಈ ನಡುವೆ ವೈದ್ಯ ವಿದ್ಯಾರ್ಥಿನಿ ಸಾವಿನ ನ್ಯಾಯಕ್ಕಾಗಿ ಆಗ್ರಹಿಸಿ ಘೋಷಣೆಗಳನ್ನು ಎತ್ತಿದ್ದರಿಂದ ಆಸ್ಪತ್ರೆಯಲ್ಲಿ ಲಘು ಉದ್ವಿಗ್ನತೆ ಉಂಟಾಗಿತ್ತು. ಭಾನುವಾರ ಸಂಜೆಯಿಂದಲೇ ವಿವಿಧ ಬುಡಕಟ್ಟು ಸಂಘಟನೆಗಳು ಆಸ್ಪತ್ರೆ ಬಳಿ ಜಮಾಯಿಸಿ ಡಾ.ಪ್ರೀತಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದವು.

ಪ್ರೀತಿ ಅವರ ನಿಧನಕ್ಕೆ ಆರೋಗ್ಯ ಸಚಿವ ಟಿ ಹರೀಶ್ ರಾವ್ ಸಂತಾಪ ಸೂಚಿಸಿದ್ದು ರಾಜ್ಯ ಸರ್ಕಾರ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ‘ಪ್ರೀತಿ ಆರೋಗ್ಯವಾಗಿ ಮರಳಬೇಕೆಂದು ನಾವು ಆಶಿಸಿದ್ದೆವು ಆದರೆ ಅವಳು ಹಿಂತಿರುಗದ ಲೋಕಕ್ಕೆ ತೆರಳಿದ್ದಾಳೆ. ರಾಜ್ಯ ಸರ್ಕಾರ ಅವರ ಕುಟುಂಬದ ಬೆಂಬಲಕ್ಕೆ ನಿಂತಿದೆ ಎಂದು ಟ್ವೀಟ್ ಮಾಡಿದ್ದಾರೆ