LATEST NEWS
ಮಂಗಳೂರು – MDMA ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದ 4 ಆರೋಪಿಗಳ ಸೆರೆ
ಮಂಗಳೂರು ಜೂನ್ 15: ಮಾದಕ ವಸ್ತು ಎಂಡಿಎಂಎ ನ್ನು ಮಂಗಳೂರಿಗೆ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೇರಳದ ಮಹಮ್ಮದ್ ರಮೀಝ್, ಮೊಹಿದ್ದಿನ್ ರಾಶೀದ್, ಅಬ್ದುಲ್ ರವೂಫ್ ಹಾಗೂ ಬೆಂಗಳೂರಿನ ಸಬಿತಾ ಎಂದು ಗುರುತಿಸಲಾಗಿದೆ.
ಆರೋಪಿಗಳು ನಿಷೇಧಿತ ಮಾದಕ ವಸ್ತುವಾದ (Methylene dioxy methamphetamine) MDMA ವನ್ನು ಬೆಂಗಳೂರಿನಿಂದ ಅಕ್ರಮವಾಗಿ ಖರೀದಿಸಿ ಮಂಗಳೂರಿಗೆ ಕಾರೊಂದರಲ್ಲಿ ತರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ಐ ಪ್ರದೀಪ್ ಟಿ ಆರ್ ರವರ ನೇತ್ರತ್ವದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರಿನ ಪಡೀಲ್ ಬಳಿ ಕಾರನ್ನು ತಪಾಸಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳಿಂದ 6 ಲಕ್ಷ ಮೌಲ್ಯದ 125 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಸಾಗಾಟಕ್ಕೆ ಉಪಯೋಗಿಸಿದ 6 ಮೊಬೈಲ್ ಫೋನ್ ಗಳು, ಡಿಜಿಟಲ್ ತೂಕ ಮಾಪನ ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಮಾರುತಿ ರಿಡ್ಜ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದು, ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.